ಕನ್ನಡಪ್ರಭ ವಾರ್ತೆ ಬೀದರ್
ಯುವಕರು ಜ್ಞಾನದ ಜೊತೆಗೆ ಕೌಶಲ್ಯವಂತರಾದರೆ ಜೀವನಕ್ಕೊಂದು ಮೌಲ್ಯ. ಕಲಿತಿರುವುದನ್ನು ಪ್ರಾಯೋಗಿಕವಾಗಿ ಕರಗತ ಮಾಡಿಕೊಂಡಾಗ ಮಾತ್ರ ಅದಕ್ಕೊಂದು ಬೆಲೆ ಐಟಿಐ ಕುಶಲಕರ್ಮಿಗಳು ಕೈಗಾರಿಕೆಗಳ ಬೆನ್ನೆಲುಬೆಂದು ಕರ್ನಾಟಕ ಸರ್ಕಾರದ ಇಂಜಿನೀಯರ್ ಪರಿಷತ್ ಸದಸ್ಯರಾದ ಹಾವಶೆಟ್ಟಿ ಪಾಟೀಲ ನುಡಿದರು.ಸ್ವಾತಂತ್ರೋತ್ಸವದ ಅಂಗವಾಗಿ ಆ.14ರಂದು ಬೀದರ್ ಜಿಲ್ಲಾ ಕಸಾಪ ಹಾಗೂ ಪ್ರಗತಿ ಐಟಿಐ ಸಹಯೋಗದಲ್ಲಿ ಹಮ್ಮಿಕೊಂಡ ಶಿಶಿಕ್ಷು ಕ್ಯಾಂಪಸ್ ಸಂದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಎಲ್ಲೆಡೆ ನೌಕರಿಗಳು ಲಭ್ಯ ಆದರೆ ಪರಿಪೂರ್ಣ ಕೌಶಲ್ಯವಂತರ ಸಮೂಹ ಸಿಗುತ್ತಿಲ್ಲ. ಯುವಕರು ಕೌಶಲ್ಯವಂತರಾದರೆ ಉದ್ಯೋಗದ ಕೊರತೆ ಇಲ್ಲ. ಅನೇಕ ಕೈಗಾರಿಕೆಗಳ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಇಲ್ಲೆಯ ಕೌಶಲ್ಯಯುಕ್ತ ಮನಸ್ಸುಗಳನ್ನು ಕಟ್ಟೋಣವೆಂದು ತಮ್ಮ ಅನುಭವ ಹಂಚಿಕೊಂಡರು.
ಮಹಿಂದ್ರಾ & ಮಹಿಂದ್ರಾ (ಟ್ರಾಕ್ಟರ್ ವಿಭಾಗ) ಕೈಗಾರಿಕೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ಲಕ್ಷ್ಮೀ ನಾರಾಯಣ ಮಾತನಾಡಿ ನಮ್ಮ ಕೈಗಾರಿಕೆ ಯಲ್ಲಿ ನೇಮಕಗೊಂಡರೆ ತಿಂಗಳಿಗೆ 13700 ರು. ವೇತನ ಜೊತೆಗೆ ಉಚಿತ ವೈದ್ಯಕೀಯ ಸೇವೆ, ಶೂ ಬಟ್ಟೆ ಹಾಗೂ ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು. ನೌಕರಿ ಮಾಡುತ್ತಲೇ ವ್ಯಾಸಂಗ ಮಾಡುವ ಕುಶಲಕರ್ಮಿಗಳಿಗೆ ನಾವು ಪ್ರೋತ್ಸಾಹ ನೀಡಲು ಬದ್ಧರಾಗಿದ್ದೇವೆ ಎಂದರು.ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಮಾತನಾಡಿದರು ಜಿಲ್ಲಾ ಕಸಾಪ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ಪ್ರಾಸ್ತಾವಿಕ ಮಾತನಾಡಿ ಕ್ಯಾಂಪಸ್‌ನ ಸಂಪೂರ್ಣ ಜವಾಬ್ದಾರಿ ವಹಿಸಿದರು. ವಿವಿಧ ವೃತ್ತಿಯ 32 ಕುಶಲ ಕರ್ಮಿಗಳು ಶಿಶುಕ್ಷಕ ತರಬೇತಿ ಕ್ಯಾಂಪಸ್‌ನಲ್ಲಿ ನೇಮಕಗೊಂಡರು. ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ ಪಾಟೀಲ ಹಾರೂರಗೇರಿ, ಅನುದಾನ ರಹಿತ ಐ.ಟಿ.ಐ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಗುಪ್ತಾ, ಮರಖಲ್ ಪಿಡಿಓ ಉಮೇಶ ಜಾಬಾ, ಆದರ್ಶ ಐ.ಟಿ. ನ ನವೀನ, ಸಂಜೀವಕುಮಾರ ಅಲೂರೆ, ಅಶೋಕಕುಮಾರ ದಿಡಗೆ, ಕಾಮಶೆಟ್ಟಿ ಬುಯಾ ಉಪಸ್ಥಿತರಿದರು. ಸಂಸ್ಥೆಯ ಪ್ರಾಚಾರ್ಯರಾದ ರಾಜಶೇಖರ ಬಿರಾದಾರ ಕ್ಯಾಂಪಸ್ ಸಂದರ್ಶನದ ಅಧ್ಯಕ್ಷತೆ ವಹಿಸಿದರು.