ಕನ್ನಡಪ್ರಭ ವಾರ್ತೆ ಮಂಡ್ಯ
ಮನರೇಗಾ ಯೋಜನೆಯಡಿ ನೂರು ಮಾನವ ದಿನಗಳ ಸೃಷ್ಟಿಸಬೇಕೆಂಬ ಕಾಯಿದೆಯೇನೋ ಇದೆ. ಆದರೆ, ನೂರು ದಿನಗಳ ಕೆಲಸ ಕೊಟ್ಟು ಕೂಲಿ ಹಣ ಬಿಡುಗಡೆಯಾಗದಿದ್ದರೆ ಕೂಲಿಕಾರರೇ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಶನಿವಾರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದಿಂದ ನಿಗದಿಪಡಿಸುವ ಮಾನವ ದಿನಗಳಿಗೆ ಅನುಗುಣವಾಗಿ ಅನುದಾನ ಬಿಡುಗಡೆಯಾಗುತ್ತದೆ. ೧೦೦ ಮಾನವ ದಿನಗಳನ್ನು ಸೃಜನೆ ಮಾಡಬೇಕೆಂದು ಕೂಲಿಕಾರರಿಗೆ ಕೆಲಸ ನೀಡಬಹುದು. ಕೆಲಸ ಕೊಟ್ಟ ಬಳಿಕ ಕೂಲಿ ಪಾವತಿಗೆ ಹಣ ಬಿಡುಗಡೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ. ಈಗಲೇ ೬ ತಿಂಗಳು ವಿಳಂಬವಾಗಿ ಕೇಂದ್ರದಿಂದ ಅನುದಾನ ಬಿಡುಗಡೆಯಾಗಿದೆ ಎಂದು ಕೂಲಿ ಕಾರ್ಮಿಕ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಾಲಿನಲ್ಲಿ ೫೨ ಲಕ್ಷ ಮಾನವ ದಿನಗಳ ಸೃಷ್ಟಿಗೆ ಸಿಇಒ ಅವರು ಬೇಡಿಕೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಅದರಲ್ಲಿ ಅರ್ಧದಷ್ಟನ್ನೂ ನೀಡದೆ ಕೇವಲ ೧೯ ಲಕ್ಷ ಮಾನವ ದಿನಗಳ ಸೃಷ್ಟಿಗೆ ಅನುಮತಿಸಿದೆ. ಅದಕ್ಕೆ ಅನುಗುಣವಾಗಿ ಸಿಇಒ ಅವರು ಜಿಲ್ಲೆಯಲ್ಲಿ ಮಾನವ ದಿನಗಳನ್ನು ಸೃಜಿಸಿದ್ದಾರೆ. ಇದರ ಜೊತೆಗೆ ೧೦೦ ದಿನಗಳ ಕೆಲಸ ನೀಡಬೇಕೆಂಬುದು ಮುಖಂಡರ ಬೇಡಿಕೆಯಾಗಿದೆ. ಇದಕ್ಕೆ ಬೇಡಿಕೆ ಕಡಿಮೆ ಇರುವ ಜಿಲ್ಲೆಗಳಿಂದ ಅನುದಾನವನ್ನು ತರಿಸಿಕೊಳ್ಳುವುದಕ್ಕೆ ಅವಕಾಶವಿದ್ದರೂ, ಅಲ್ಲಿ ಬೇಡಿಕೆ ಕಡಿಮೆ ಇಲ್ಲದಿದ್ದರೆ ಕೂಲಿಯನ್ನು ನೀಡುವುದಕ್ಕೆ ಹೇಗೆ ಸಾಧ್ಯ. ಕಾಯಿದೆಯನ್ನು ಜಾರಿಗೊಳಿಸುವ ಸಮಯದಲ್ಲಿ ವಾಸ್ತವವನ್ನೂ ನಾವು ಆಲೋಚಿಸಬೇಕಲ್ಲವೇ ಎಂದರು.ಹೆಚ್ಚು ಕೂಲಿಗೆ ಬೇಡಿಕೆ ಇರುವ ತಾಲೂಕುಗಳಿಗೆ ಕಡಿಮೆ ಕೂಲಿ ಬೇಡಿಕೆ ಇರುವ ತಾಲೂಕುಗಳಿಂದ ಮನರೇಗಾ ಅನುದಾನ ವರ್ಗಾವಣೆ ಮಾಡಬೇಕೆಂಬ ಮುಖಂಡರ ಬೇಡಿಕೆಗೆ ಸ್ಪಂದಿಸಿದ ಸಚಿವರು, ಕಡಿಮೆ ಕೂಲಿ ಬೇಡಿಕೆ ಇರುವ ತಾಲೂಕುಗಳಿಂದ ಶೇ.೨೦ರಷ್ಟು ಅನುದಾನವನ್ನು ಹೆಚ್ಚು ಬೇಡಿಕೆ ಇರುವ ತಾಲೂಕುಗಳಿಗೆ ವರ್ಗಾಯಿಸಿ ನೂರರಷ್ಟು ಪ್ರಗತಿ ಸಾಧನೆಗೆ ನೆರವಾಗುವಂತೆ ಸಿಇಒ ಅವರಿಗೆ ಸೂಚಿಸಿದರು.
ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೆ ಅವಕಾಶವಿದ್ದರೆ ಮುಖ್ಯಮಂತ್ರಿ, ಪಂಚಾಯತ್ ರಾಜ್ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.ಗುತ್ತಿಗೆದಾರರಿಗೆ ಕೆಲಸ ನೀಡಿದರೆ ಕಠಿಣ ಕ್ರಮ:
ಮದ್ದೂರು, ಕೆ.ಆರ್.ಪೇಟೆ ಮತ್ತು ಮಳವಳ್ಳಿ ತಾಲೂಕುಗಳಲ್ಲಿ ಮನರೇಗಾ ಕೆಲಸಗಳನ್ನು ಗುತ್ತಿಗೆದಾರರಿಂದ ಮಾಡಿಸುತ್ತಿರುವ ಬಗ್ಗೆ ಕೂಲಿ ಕಾರ್ಮಿಕ ಮುಖಂಡರು ಸಚಿವರ ಗಮನಕ್ಕೆ ತಂದಾಗ, ಮನರೇಗಾ ಕಾಮಗಾರಿಗಳನ್ನು ಕೃಷಿ ಕೂಲಿಕಾರ್ಮಿಕರಿಂದಲೇ ಮಾಡಿಸಬೇಕು. ಗುತ್ತಿಗೆದಾರರಿಗೆ ಕೆಲಸ ನೀಡಿ ಯಂತ್ರೋಪಕರಣಗಳಿಂದ ಕೆಲಸ ಮಾಡಿಸುವುದು ಕಂಡುಬಂದಲ್ಲಿ ಅಂತಹ ಪಿಡಿಒ ಹಾಗೂ ಇಒಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.ಕೃಷಿ ಕೂಲಿ ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಮನವಿಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ನಿಯಮಾನುಸಾರ ಪರಿಹರಿಸಬಹುದಾದ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ ವರದಿ ನೀಡುವಂತೆ ಸಚಿವರು ತಿಳಿಸಿದರು.
ವಸತಿ ಹಾಗೂ ನಿವೇಶನ ರಹಿತ ಬಡ ಕುಟುಂಬಗಳಿಗೆ ಗ್ರಾಮೀಣ ಭಾಗದಲ್ಲಿ ನಿವೇಶನ ಒದಗಿಸಲು ಸರ್ಕಾರಿ ಭೂಮಿ ಇದ್ದಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ಹಕ್ಕು ಪತ್ರ, ನಿವೇಶನ ಕುರಿತು ಸಮಸ್ಯೆಗಳಿದ್ದಲ್ಲಿ ತಹಸೀಲ್ದಾರ್, ತಾಲೂಕು ಪಂಚಾಯ್ತಿ ಇಒ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಸಮಸ್ಯೆ ಪರಿಹಾರವಾಗದಿದ್ದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದರು.ಪ್ರತ್ಯೇಕ ಸಭೆ ಭರವಸೆ:
ಕೃಷಿ ಕೂಲಿ ಕಾರ್ಮಿಕರಿಗೆ ಯಾವುದೇ ಆಧಾರವಿಲ್ಲದೆ ಬ್ಯಾಂಕ್‌ಗಳಿಂದ ೨ ಲಕ್ಷ ರು. ಸಾಲ ನೀಡಬೇಕು. ಈ ಬಗ್ಗೆ ಚರ್ಚೆ ನಡೆದ ಸಂದರ್ಭದಲ್ಲಿ ಸಚಿವರು ಬ್ಯಾಂಕ್ ವಿಷಯಗಳಿಗೆ ಸಂಬಂಧಿಸಿದಂತೆ ವ್ಯಕ್ತಿವಾರು ಮಾಹಿತಿ ನೀಡಿದರೆ ಬ್ಯಾಂಕ್‌ನೊಂದಿಗೆ ಚರ್ಚಿಸುವುದು ಸುಲಭ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ವಿಷಯಗಳಿಗೆ ಪ್ರತ್ಯೇಕವಾಗಿ ಸಭೆ ನಡೆಸುವುದಾಗಿ ಸಚಿವರು ತಿಳಿಸಿದರು.ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಂಡ್ಯ ನಗರ ವ್ಯಾಪ್ತಿಯಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚು ಜನ ನಿವೇಶನ ರಹಿತ ಬಡವರಿದ್ದು ಅವರಿಗೆ ನಿವೇಶನ ಒದಗಿಸಲು ೩೫ ಎಕರೆ ಭೂಮಿ ಬೇಕಿದ್ದು, ಮಂಡ್ಯ ನಗರ ವ್ಯಾಪ್ತಿಯಲ್ಲಿ ಇರುವುದಿಲ್ಲ. ೧೦ ಕಿಮೀ ವ್ಯಾಪ್ತಿಗೆ ಹೋದರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತದೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ ನಿವೇಶನ ಒದಗಿಸಲು ಸಮಸ್ಯೆ ಪರಿಹರಿಸಿಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನರೇಗಾ ರಾಜ್ಯಮಟ್ಟದ ಅಧಿಕಾರಿ ಹಿರೇಮಠ್ ಇದ್ದರು.ಕೇಂದ್ರದಿಂದ ೧೧ ಲಕ್ಷ ಮಾನವ ದಿನಗಳ ಇಳಿಕೆ: ಕೆ.ಆರ್.ನಂದಿನಿ
ಕನ್ನಡಪ್ರಭ ವಾರ್ತೆ ಮಂಡ್ಯಮನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ವರ್ಷ ೩೦ ಲಕ್ಷ ಮಾನವ ದಿನಗಳಿಗೆ ಜಿಲ್ಲೆಗೆ ಅನುಮತಿ ನೀಡಲಾಗುತ್ತಿತ್ತು. ಈ ವರ್ಷ ೧೯ ಲಕ್ಷ ಮಾನವ ದಿನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಏಕಾಏಕಿ ೧೧ ಲಕ್ಷ ಮಾನವ ದಿನಗಳನ್ನು ಕಡಿತಗೊಳಿಸಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಸಚಿವರ ಗಮನಕ್ಕೆ ತಂದರು.ಶನಿವಾರ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನರೇಗಾ ವಿಷಯಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿದರು. ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ೧೨ ರಿಂದ ೧೩ ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವಂತೆ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿತ್ತು. ಆದರೆ, ಕೇಂದ್ರ ೯ ಕೋಟಿ ಮಾನವ ದಿನಗಳ ಸೃಜನೆಗಷ್ಟೇ ಅನುಮತಿ ನೀಡಿದೆ. ಜೊತೆಗೆ ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲಿ ಶೇ.೫ರಷ್ಟು ಕಾಮಗಾರಿಗಳನ್ನು ಉಳಿಸಿಕೊಳ್ಳುವುದಕ್ಕೂ ಕಡಿವಾಣ ಹಾಕಿರುವುದಾಗಿ ತಿಳಿಸಿದರು.
ಹೀಗೆ ಪ್ರತಿ ವರ್ಷ ಶೇ.೫ರಷ್ಟು ಉಳಿಸುತ್ತಿದ್ದ ಕಾಮಗಾರಿಗಳು ಏಳು ವರ್ಷದಿಂದ ೨೧ ಸಾವಿರ ಕಾಮಗಾರಿಗಳು ಬಾಕಿ ಇವೆ. ೯೮ ಕೋಟಿ ರು. ಸಾಮಗ್ರಿ ವೆಚ್ಚದಲ್ಲಿ ೨೫ ಕೋಟಿ ರು. ನಾನು ಬಂದ ಮೇಲೆ ಬಿಡುಗಡೆಗೊಳಿಸಿರುವುದಾಗಿ ಹೇಳಿದರು.