ಕನ್ನಡಪ್ರಭ ವಾರ್ತೆ ಶಿರಸಿ
ಶನಿವಾರ ನಗರದ ದೀನ ದಯಾಳ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಾವಿರ ದಿನಗಳ ಸಾರ್ಥಕ ಸಂಭ್ರಮವಲ್ಲ, ಬದಲಾಗಿ ಸಾವಿರ ಸುಳ್ಳು, ಸಾವಿರ ವಿವಾದ ಮತ್ತು ಸಾವಿರ ಅಪರಾಧಗಳ ಕಳಂಕಿತ ದಿನಗಳು. ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿದೆ. ಕೇವಲ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಮಟ್ಟದಲ್ಲಿ ಮಾತ್ರವಲ್ಲದೆ, ಸಚಿವರು, ಶಾಸಕರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳವರೆಗೂ ಭ್ರಷ್ಟಾಚಾರದ ಬೇರುಗಳು ಆಳವಾಗಿ ಇಳಿದಿವೆ. ಇಡೀ ವ್ಯವಸ್ಥೆಯೇ ಭ್ರಷ್ಟಮಯವಾಗಿದೆ ಎಂದರು.
ದೇಶದ ಮುಂದೆ ಕರ್ನಾಟಕ ತಲೆ ತಗ್ಗಿಸುವಂತೆ ಈ ಕಾಂಗ್ರೆಸ್ ಸರ್ಕಾರ ಮಾಡಿದೆ. ಜನರ ವಿಶ್ವಾಸ ಗಳಿಸುವಲ್ಲಿ ಸೋತಿರುವ ಸರ್ಕಾರ, ಕೇವಲ ಭ್ರಷ್ಟ ಹಾದಿಯಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಯಾವುದೇ ಸರ್ಕಾರದ ಮೊದಲ ಆದ್ಯತೆ ಕಾನೂನು ಮತ್ತು ಸುವ್ಯವಸ್ಥೆಯಾಗಿರಬೇಕು. ಆದರೆ ಪ್ರಸ್ತುತ ರಾಜ್ಯದಲ್ಲಿ ಸಾರ್ವಜನಿಕರ ಜೀವ ಮತ್ತು ಆಸ್ತಿ-ಪಾಸ್ತಿಗೆ ಬೆಲೆಯೇ ಇಲ್ಲದಂತಾಗಿದೆ. ಅಪರಾಧಗಳ ಸರಣಿ ಮುಂದುವರಿಯುತ್ತಲೇ ಇದೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿ, ಅಪರಾಧೀಕರಣ ಕೂಡ ವಿಕೇಂದ್ರೀಕರಣವಾಗಿದೆ ಎಂದರು.ಸಾವಿರ ದಿನಗಳ ಸಾಧನೆಯ ಹೆಸರಿನಲ್ಲಿ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಅಭಿವೃದ್ಧಿಗಿಂತ ಹೆಚ್ಚಾಗಿ ವಿವಾದಗಳೇ ಈ ಸರ್ಕಾರದ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದ ಕಾಗೇರಿ, ಅಪರಾಧಿಗಳ ಮನಸ್ಥಿತಿ ಪುಷ್ಟಿ ನೀಡುತ್ತಿದೆ. ಅಪರಾಧ ಚಟುವಟಿಕೆ, ಎಲ್ಲ ಇಲಾಖೆ ಎಲ್ಲವೂ ಭ್ರಷ್ಟಾಚಾರವಾಗಿದೆ. ಭ್ರಷ್ಟಾಚಾರದಲ್ಲೂ ಎಲ್ಲ ದಾಖಲೆ ಮೀರಿಸಿದ್ದು ಸಾವಿರ ದಿನಗಳ ಸಾಧನೆ. ಇನ್ನಾದರೂ ಸರ್ಕಾರ ಜವಾಬ್ದಾರಿಯುತವಾಗಿ ಕಾರ್ಯ ಮಾಡಬೇಕು. ಈ ಸಾವಿರ ದಿನ ಹೊಳೆಯಲ್ಲಿ ಹುಣಸೇಹಣ್ಣು ತೊಳದಂತೆ ಆಗಿದೆ. ಕೇಂದ್ರದ ಯಾವುದೇ ಯೋಜನೆ ಅನುಷ್ಠಾನ ಮಾಡಲಾಗದ ಸ್ಥಿತಿ ಇದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಜವಾಬ್ದಾರಿಯಿಂದ ಹೇಳಬೇಕು. ಈಗಾಗಲೇ ಜನ ರೋಸಿ ಹೋಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಮಾತನಾಡಿದರು. ಮಾಜಿ ಶಾಸಕ ಸುನೀಲ ಹೆಗಡೆ, ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ ನಾಯ್ಕ, ಶಿರಸಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ಬನವಾಸಿ ಮಂಡಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಕಾಂತ ಬಳ್ಳಾರಿ, ಸಾಮಾಜಿಕ ಜಾಲತಾಣದ ರವಿಕುಮಾರ ಶೆಟ್ಟಿ ಮತ್ತಿತರರು ಇದ್ದರು.