20 ಲಕ್ಷ ಗುರಿ ಬದಲು ಮೊದಲ ದಿನ ಕೇವಲ 10000 ಜನರ ಸಮೀಕ್ಷೆ

KannadaprabhaNewsNetwork |  
Published : Sep 23, 2025, 02:08 AM ISTUpdated : Sep 23, 2025, 05:21 AM IST
ಸಮೀಕ್ಷೆ | Kannada Prabha

ಸಾರಾಂಶ

ವಿವಾದ, ಗೊಂದಲಗಳ ನಡುವೆಯೇ ಸೋಮವಾರದಿಂದ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನೀರಸ ಆರಂಭ ಕಂಡಿದೆ. ಮೊದಲ ದಿನದಾಂತ್ಯಕ್ಕೆ ನಿರೀಕ್ಷಿತ 20 ಲಕ್ಷ ಜನರ ಬದಲು 2765 ಕುಟುಂಬಗಳ ಕೇವಲ 10,642 ಮಂದಿಯ ಸಮೀಕ್ಷೆ ಮಾತ್ರ ನಡೆಸಲಾಗಿದೆ.

  ಬೆಂಗಳೂರು :  ವಿವಾದ, ಗೊಂದಲಗಳ ನಡುವೆಯೇ ಸೋಮವಾರದಿಂದ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನೀರಸ ಆರಂಭ ಕಂಡಿದೆ. ಮೊದಲ ದಿನದಾಂತ್ಯಕ್ಕೆ ನಿರೀಕ್ಷಿತ 20 ಲಕ್ಷ ಜನರ ಬದಲು 2765 ಕುಟುಂಬಗಳ ಕೇವಲ 10,642 ಮಂದಿಯ ಸಮೀಕ್ಷೆ ಮಾತ್ರ ನಡೆಸಲಾಗಿದೆ.

ಇಂಟರ್ನೆಟ್‌ ಇಲ್ಲದ ಕಡೆ ಸಮೀಕ್ಷೆಗೆ ಬಳಸುವ ಆ್ಯಪ್‌ ಕೆಲಸ ಮಾಡದೇ ಇರುವುದು, ಮೊದಲ ದಿನ ಗಣತಿದಾರರಿಗೆ ಸೂಕ್ತ ರೀತಿಯಲ್ಲಿ ಕಿಟ್‌ ವಿತರಣೆ ಆಗದ್ದು, ಕೆಲವು ಕಡೆ ಕಿಟ್‌ಗಳು ಸಂಜೆ ವೇಳೆಗೆ ಕೈ ಸೇರಿದ್ದು, ಇನ್ನು ಕೆಲವರಿಗೆ ಕಿಟ್‌ಗಳು ದೊರೆತರೂ ಮೊಬೈಲ್ ನೆಟ್‌ವರ್ಕ್ ಕೈಕೊಟ್ಟಿದ್ದು, ಇವೆರಡೂ ಇದ್ದರೂ, ಗಣತಿದಾರರಿಗೇ ಆ ಆ್ಯಪ್ ಬಗ್ಗೆ ಅಪೂರ್ಣ ಮಾಹಿತಿ ಇರುವುದು ಸೇರಿದಂತೆ ಹಲವು ಕಾರಣಗಳಿಂದ ಗಣತಿಗೆ ಅಡ್ಡಿಯಾಗಿದೆ ಎನ್ನಲಾಗಿದೆ.

ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಕೇವಲ 400 ಕುಟುಂಬಗಳ ಸಮೀಕ್ಷೆ ನಡೆದಿದ್ದು, ದಿನದ ಅಂತ್ಯಕ್ಕೆ ಅದು ಕೇವಲ 10,642 ಮಂದಿಗೆ ತಲುಪಿದೆ. ತನ್ಮೂಲಕ ಸಮೀಕ್ಷೆಗೆ ಅಂದಾಜು ಮಾಡಿರುವ 7 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ ಶೇ. 0.015 ರಷ್ಟು ಜನಸಂಖ್ಯೆಯನ್ನು ಮಾತ್ರವೇ ಮೊದಲ ದಿನ ಸಮೀಕ್ಷೆ ಮಾಡಲಾಗಿದೆ.

ಶಾಲೆ, ಅಂಗನವಾಡಿಗಳಲ್ಲಿ ಶಿಬಿರ:ಇಂಟರ್ನೆಟ್‌ ಇಲ್ಲದೆಡೆ ಆ್ಯಪ್‌ ಕೆಲಸ ನಿರ್ವಹಿಸದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಿ ಗಣತಿ ನಡೆಸಲು ಆಯೋಗ ಸಿದ್ಧತೆ ನಡೆಸಿದೆ.

ಎಲ್ಲೆಲ್ಲಿ ಎಷ್ಟು?:

ದಿನದ ಅಂತ್ಯಕ್ಕೆ ಹಾವೇರಿಯಲ್ಲಿ 680 ಕುಟುಂಬದ 2,662 ಮಂದಿ, ಚಿತ್ರದುರ್ಗದಲ್ಲಿ 420 ಕುಟುಂಬದ 1,579 ಮಂದಿ, ಗದಗ ಜಿಲ್ಲೆಯಲ್ಲಿ 376 ಕುಟುಂಬಗಳ 1,451 ಜನಸಂಖ್ಯೆ, ಬಾಗಲಕೋಟೆ ಜಿಲ್ಲೆಯಲ್ಲಿ 219 ಕುಟುಂಬಗಳ 893 ಮಂದಿ, ಬೆಳಗಾವಿಯಲ್ಲಿ 197 ಕುಟುಂಬಗಳ 766 ಮಂದಿ, ದಾವಣಗೆರೆ ಜಿಲ್ಲೆಯ 191 ಕುಟುಂಬಗಳ 748 ಸದಸ್ಯರು, ಮಂಡ್ಯ ಜಿಲ್ಲೆಯಲ್ಲಿ 172 ಕುಟುಂಬಗಳ 637 ಮಂದಿ, ಉತ್ತರ ಕನ್ನಡ ಜಿಲ್ಲೆಯ 125 ಕುಟುಂಬಗಳ 484 ಮಂದಿಯ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ.

ಉಳಿದಂತೆ ಹಾಸನ 63, ಕಲಬುರಗಿ 57, ಕೊಡಗು, ರಾಯಚೂರು ತಲಾ 37, ಚಿಕ್ಕಮಗಳೂರು 32, ವಿಜಯನಗರ 19, ವಿಜಯಪುರ, ಉಡುಪಿಯ ತಲಾ 7, ಕೊಪ್ಪಳ, ಬೀದರ್‌ ತಲಾ 6, ಬಳ್ಳಾರಿ, ಧಾರವಾಡ ತಲಾ 5, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಚಿಕ್ಕಬಳ್ಳಾಪುರ ತಲಾ 3, ವಿಜಯನಗರ, ಕೋಲಾರ, ದಕ್ಷಿಣ ಕನ್ನಡ, ಚಾಮರಾಜನಗರ, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಎರಡು ಕುಟುಂಬಗಳ ಸಮೀಕ್ಷೆ ಮಾತ್ರ ನಡೆಸಿರುವುದಾಗಿ ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.

ಪ್ರತಿ 20 ಗಣತಿದಾರರಿಂದ ಒಬ್ಬರ ಸಮೀಕ್ಷೆ!:

ಗಣತಿಗೆ 1.85 ಲಕ್ಷ ಶಿಕ್ಷಕರು, ಪ್ರತಿ 10-12 ಮಂದಿ ಗಣತಿದಾರರ ಮೇಲೊಬ್ಬ ಮೇಲ್ವಿಚಾರಕರನ್ನೂ ನೇಮಿಸಿ ಅಗತ್ಯ ತರಬೇತಿಯನ್ನೂ ಒದಗಿಸಲಾಗಿದೆ. ಪ್ರತಿ ಗಣತಿದಾರರಿಗೆ 120 ರಿಂದ 150 ಮನೆಗಳ ಒಂದು ಬ್ಲಾಕ್‌ ಮಾತ್ರ ಸಮೀಕ್ಷೆಗೆ ನಿಗದಿ ಮಾಡಿದೆ. ಒಂದು ದಿನಕ್ಕೆ ಕನಿಷ್ಠ 7 ರಿಂದ 8 ಮನೆಗಳ ಸಮೀಕ್ಷೆ ನಡೆಸಿದರೂ ನಿಗದಿತ ಸಮಯದಲ್ಲಿ ಅಂದರೆ 16 ದಿನಗಳಲ್ಲಿ ಇಡೀ ಸಮೀಕ್ಷೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂಬ ಅಂದಾಜಿನಲ್ಲಿ ಆಯೋಗ ಇತ್ತು.

ಆದರೆ, ಮೀಟರ್ ರೀಡರ್‌ಗಳು ಈ ಮೊದಲೇ ಪ್ರತಿ ಮನೆಗೆ ಸ್ಟಿಕರ್‌ಗಳನ್ನು ಅಂಟಿಸಿದ್ದರಿಂದ ಮನೆಗಳ ಜಿಯೋಟ್ಯಾಗಿಂಗ್ ಮತ್ತು ಗಣತಿ ಬ್ಲಾಕ್‌ನ ನಕ್ಷೆ ಸುಲಭ ಎನ್ನಲಾಗಿತ್ತು. ಆದರೆ, ಮೀಟರ್ ರೀಡರ್‌ಗಳು ಅಂಗಡಿಗಳಿಗೂ ಸ್ಟಿಕ್ಕರ್‌ ಅಂಟಿಸಿ ಹೋಗಿದ್ದಾರೆ. ಹೀಗಾಗಿ ಬ್ಲಾಕ್‌ ನಿಗದಿ, ರಸ್ತೆ ಗುರುತಿಸುವುದೇ ಸಮಸ್ಯೆಯಾಯಿತು ಎಂದು ತಿಳಿದುಬಂದಿದೆ. ಹೀಗಾಗಿ 2 ಲಕ್ಷ ಗಣತಿದಾರರು ಕೇವಲ 10,000 ಮಂದಿಯ ಗಣತಿ ನಡೆಸಿದ್ದು, ಸರಾಸರಿ 20 ಗಣತಿದಾರರು ಒಬ್ಬರ ಸಮೀಕ್ಷೆ ನಡೆಸಿದಂತಾಗಿದೆ.

ಕಿಟ್‌ ತಲುಪದೆ ಸಮೀಕ್ಷೆಗೆ ವಿಘ್ನ:

ಆನ್ಲೈನ್‌ ಸಮೀಕ್ಷೆಯಾಗಿರುವುದರಿಂದ ಕಿಟ್ ಅಗತ್ಯವೇನಿಲ್ಲ ಎಂದು ಹೇಳಬಹುದು. ಆದರೆ, ಪ್ರತಿ ಮನೆಯ ಸಮೀಕ್ಷೆ ಮುಗಿದ ನಂತರ ಬರೆಸಿಕೊಳ್ಳುವ ಸ್ವಯಂ ದೃಢೀಕರಣಪತ್ರ, ಗುರುತಿನಚೀಟಿಗೆ ಇದು ಅಗತ್ಯ. ಅನೇಕರಿಗೆ ಸಂಜೆ 7 ಗಂಟೆಯಾದರೂ ಕಿಟ್‌ ತಲುಪಿಲ್ಲ ಎನ್ನಲಾಗಿದೆ. ಇನ್ನು ಹರಸಾಹಸ ಪಟ್ಟು ಆ್ಯಪ್ ಡೌನ್‌ ಲೋಡ್ ಮಾಡಿದರೆ ಲಾಗ್‌ಇನ್ ಆಗಲು ಒಟಿಪಿ ಸಿಗುತ್ತಿರಲಿಲ್ಲ. ಕೆಲ ಕಡೆ ಗಣತಿದಾರರ ಮೊಬೈಲ್‌ ಕೈ ಕೊಡುವುದು, ಆ್ಯಪ್‌ ಗೆ ಅಗತ್ಯ ಸ್ಟೋರೇಜ್‌ ಇಲ್ಲದಿರುವುದು ಸೇರಿ ಹಲವು ತಾಂತ್ರಿಕ ಕಾರಣಗಳಿಂದ ಮೊದಲ ದಿನ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

3 ಪ್ರಮುಖ ಜಿಲ್ಲೆಗಳಲ್ಲೇ ತಲಾ

ಒಂದು ಕುಟುಂಬದ ಸಮೀಕ್ಷೆ!

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಸಿದ್ಧತೆ ವಿಳಂಬದ ಹಿನ್ನೆಲೆಯಲ್ಲಿ ಸೆ.22 ರಿಂದ ಸಮೀಕ್ಷೆ ಶುರುವಾಗಿಲ್ಲ. ಬೆಂಗಳೂರು ನಗರ ವ್ಯಾಪ್ತಿಗೆ ಬಾರದಿದ್ದರೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಆನೇಕಲ್‌ ತಾಲೂಕಿನಲ್ಲಿ 1 ಕುಟುಂಬದ (4 ಮಂದಿ) ಸಮೀಕ್ಷೆ ಮಾತ್ರ ನಡೆಸಲಾಗಿದೆ.

ಇನ್ನು ನಾಡ ಹಬ್ಬ ದಸರಾ ಸಂಭ್ರಮದಲ್ಲಿ ಮುಳುಗಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲೂ ಇಡೀ ಜಿಲ್ಲೆಗೆ ಒಂದು ಕುಟುಂಬದ ಒಬ್ಬರೇ ವ್ಯಕ್ತಿಯನ್ನು ಮಾತ್ರ ಸಮೀಕ್ಷೆ ನಡೆಸಲಾಗಿದೆ. ತುಮಕೂರು ಜಿಲ್ಲೆಯಲ್ಲೂ 1 ಕುಟುಂಬದ 3 ಜನರನ್ನು ಸಮೀಕ್ಷೆ ನಡೆಸಲಾಗಿದೆ.

ಮೊದಲ ದಿನ ಸಮಸ್ಯೆ ಸಹಜಆರಂಭದ ದಿನವಾಗಿರುವುದರಿಂದ ಗಣತಿದಾರರು ಕಿಟ್‌ ಸಂಗ್ರಹಿಸುವುದು, ಬ್ಲಾಕ್‌ ಪತ್ತೆ ಮಾಡಿಕೊಂಡು ಸ್ಥಳ ಪರಿಶೀಲನೆ ನಡೆಸಿಕೊಳ್ಳುವುದು. ಆ್ಯಪ್‌ ಡೌನ್ಲೋಡ್‌, ತಾಂತ್ರಿಕ ಸಮಸ್ಯೆ, ನೆಟ್‌ವರ್ಕ್‌ ಸಮಸ್ಯೆ, ಒಟಿಪಿ ಬಾರದಿರುವಂತಹ ಸಣ್ಣಪುಟ್ಟ ಸಮಸ್ಯೆ ಉಂಟಾಗಿರುತ್ತದೆ. ಮಂಗಳವಾರದಿಂದ ಸಮೀಕ್ಷೆಗೆ ವೇಗ ಸಿಗಲಿದೆ.

- ಕೆ.ಎ. ದಯಾನಂದ್‌, ಸದಸ್ಯ ಕಾರ್ಯದರ್ಶಿ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!