ಅಜೀಜಅಹ್ಮದ ಬಳಗಾನೂರ
ನರೇಗಾದಡಿ ಕೆಲಸ ಮಾಡುವವರ ಮಕ್ಕಳಿಗೆ ಶಿಶುಪಾಲನಾ ಸೌಲಭ್ಯ ಒದಗಿಸಲು ಆರಂಭಿಸಲಾಗಿದ್ದ "ಕೂಸಿನ ಮನೆ "ಯ ಆರೈಕೆದಾರರಿಗೆ ನರೇಗಾ ಯೋಜನೆಯಡಿ ವೇತನ ನೀಡಲು ಆಗದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಆದೇಶ ಹೊರಡಿಸಿದೆ. ಹೀಗಾಗಿ ಆರೈಕೆದಾರರು ಇಲ್ಲದೆ ರಾಜ್ಯದ 3679 ಕೂಸಿನ ಮನೆಗೆ ಬೀಗ ಬಿದ್ದಿದೆ.
ಗ್ರಾಮೀಣ ಭಾಗದ ಕೃಷಿ ಮತ್ತು ಕೂಲಿ ಕಾರ್ಮಿಕರ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದಾಗ ಮಕ್ಕಳಿಗೆ ತಾಯಿ ಹಾಲು ಮತ್ತು ಪೌಷ್ಟಿಕ ಆಹಾರ ದೊರೆಯದೆ ಅಪೌಷ್ಟಿಕತೆಗೆ ಒಳಗಾಗುವುದನ್ನು ತಪ್ಪಿಸಲು 2023ರಲ್ಲಿ ರಾಜ್ಯ ಸರ್ಕಾರವು "ಕೂಸಿನ ಮನೆ " ಹೆಸರಿನಲ್ಲಿ ಶಿಶುಪಾಲನಾ ಕೇಂದ್ರ ಆರಂಭಿತ್ತು.ಕಾರಣವೇನು?
ಕೂಸಿನ ಮನೆಯ ಆರೈಕೆದಾರರಿಗೆ ನರೇಗಾ ಯೋಜನೆಯಡಿ ವೇತನ ನೀಡಲು ಆಗದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಈ ವರೆಗೂ ನರೇಗಾ ಯೋಜನೆಯಡಿಯೇ ವಾರದಿಂದ 15 ದಿನಕ್ಕೊಮ್ಮೆ ಆರೈಕೆದಾರರಿಗೆ ವೇತನ ನೀಡಲಾಗುತ್ತಿತ್ತು. ಇದೀಗ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಪತ್ರ ಬರೆಯುತ್ತಿದ್ದಂತೆ ರಾಜ್ಯ ಸರ್ಕಾರವು ತನ್ನ ಬೊಕ್ಕಸದಿಂದ ಆರೈಕೆದಾರರಿಗೆ ವೇತನ ನೀಡಲು ಆಗದು ಎಂದು ಕೂಸಿನ ಮನೆ ಸ್ಥಗಿತಗೊಳಿಸಿದೆ.ವಿನಾಯಿತಿ ನೀಡಿದ್ದ ಸರ್ಕಾರ:
ಈ ಮೊದಲು ಒಂದು ಕೂಸಿನ ಮನೆಗೆ ಇಬ್ಬರನ್ನು ನೇಮಕ ಮಾಡಿ ನರೇಗಾ ಯೋಜನೆಯಡಿಯೇ ವೇತನ ನೀಡಲಾಗುತ್ತಿತ್ತು. ಜತೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಕಡ್ಡಾಯಗೊಳಿಸಿದ್ದ ಎನ್‌ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂಮ್) ಹಾಜರಾತಿಯಿಂದ ವಿನಾಯಿತಿ ನೀಡಲಾಗಿತ್ತು. ಆದರೆ, ಈ ವಿನಾಯಿತಿಯನ್ನು ಆರೈಕೆದಾರರಿಗೆ ನೀಡಬಾರದೆಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ತಿಳಿಸಿದ್ದರಿಂದ ಇದೀಗ ಕೂಸಿನ ಮನೆಯನ್ನೇ ಸ್ಥಗಿತಗೊಳಿಸಲಾಗಿದೆ.ಏನೇನು ಸೌಲಭ್ಯಗಳಿದ್ದವು?
ಪ್ರತಿ ಗ್ರಾಪಂನಲ್ಲಿ ಕೂಲಿ ಕೆಲಸಕ್ಕೆ ತೆರಳುವವರ 6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳನ್ನು ಇಲ್ಲಿ ಆರೈಕೆ ಮಾಡಲಾಗುತ್ತಿತ್ತು. ಪ್ರತಿ ಕೇಂದ್ರವು ಮಕ್ಕಳಿಗೆ ಆರೋಗ್ಯ ರಕ್ಷಣೆ, ಪೌಷ್ಟಿಕಾಂಶಯುಕ್ತ ಆಹಾರ (ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ತಿಂಡಿ ಒಳಗೊಂಡಂತೆ), ಲಸಿಕೆ, ಆರೋಗ್ಯ ತಪಾಸಣೆ, ಆಟಿಕೆ ಮತ್ತು ಶಿಕ್ಷಣಕ್ಕೆ ಪೂರಕವಾದ ಸಾಮಗ್ರಿ ಒದಗಿಸಲಾಗಿತ್ತು. ಪ್ರತಿ ಕೇಂದ್ರದಲ್ಲಿ ಗರಿಷ್ಠ 25 ಮಕ್ಕಳಿಗೆ ಅವಕಾಶ ಕಲ್ಪಿಸಿ ನಿತ್ಯ 6ರಿಂದ 7 ಗಂಟೆ ಕಾರ್ಯನಿರ್ವಹಿಸುತ್ತಿದ್ದವು. ನರೇಗಾ ಜಾಬ್ ಕಾರ್ಡ್ ಹೊಂದಿರುವವರನ್ನೇ ಪ್ರತಿ ಕೇಂದ್ರಕ್ಕೆ ಇಬ್ಬರು ಆರೈಕೆದಾರರನ್ನು ಮಕ್ಕಳ ಆರೈಕೆಗಾಗಿ ತರಬೇತಿ ನೀಡಿ ನೇಮಕ ಮಾಡಿಕೊಂಡು ನಿತ್ಯ ತಲಾ ₹ 370 ವೇತನ ನೀಡಲಾಗುತ್ತಿತ್ತು. 3679 ಕೂಸಿನ ಮನೆ2023ರ ಸೆಪ್ಟಂಬರ್ 14ಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ನರೇಗಾ ಯೋಜನೆಯನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸುತ್ತಿರುವ ರಾಜ್ಯದ 4 ಸಾವಿರ ಗ್ರಾಪಂಗಳಲ್ಲಿ 6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳಿಗೆ ಈ ಶಿಶುಪಾಲನಾ ಕೇಂದ್ರ ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಂತೆ ಪ್ರಸ್ತುತ ರಾಜ್ಯದಲ್ಲಿ 3679 ಕಡೆ ಕೂಸಿನ ಮನೆ ಆರಂಭಿಸಿ ಪ್ರತಿ ಕೇಂದ್ರದಲ್ಲಿ ಇಬ್ಬರಂತೆ ರಾಜ್ಯಾದ್ಯಂತ 7358 ಕೇರ್‌ಟೇಕರ್‌ಗಳು ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯಾದ್ಯಂತ ಒಟ್ಟು 46,723 ಮಕ್ಕಳ ನೋಂದಣಿಯಾಗಿದ್ದರು.
ಯೋಜನೆ ಹಿಂಪಡೆದು ಆದೇಶಕೂಸಿನ ಮನೆ ಒಂದು ಸಾಂಸ್ಥಿಕ ಮತ್ತು ಶಾಶ್ವತವಾದ ಮಕ್ಕಳ ಆರೈಕೆ ಕೇಂದ್ರವಾಗಿದೆ. ಈ ಕೇಂದ್ರದ ಸಿಬ್ಬಂದಿ ಮತ್ತು ಅವರ ವೇತನವನ್ನು ನರೇಗಾ ಯೋಜನೆಯಡಿ ಭರಿಸಲು ನರೇಗಾ ಕಾಯ್ದೆಯ ಶಡ್ಯೂಲ್ 2, ಕಂಡಿಕೆ 24ರಂತೆ ಅವಕಾಶವಿರದ ಕಾರಣ "ಕೂಸಿನ ಮನೆ " ಕೇರ್ ಟೇಕರ್‌ಗಳಿಗೆ ಎನ್‌ಎಂಎಂಎಸ್ ವಿನಾಯಿತಿಗೆ ಒಪ್ಪಿರುವುದಿಲ್ಲ. ಆದ್ದರಿಂದ ಈ ಆದೇಶವನ್ನು ತಕ್ಷಣ ಜಾರಿಗೆ ಬರುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಆದೇಶ ಹೊರಡಿಸಿದೆ. ಇದರಿಂದಾಗಿ ಕೇರ್ ಟೇಕರ್‌ಗಳಿಗೆ ವೇತನ ಹೇಗೆ ನೀಡಬೇಕು ಎಂಬ ಗೊಂದಲದಿಂದಾಗಿ ಕೂಸಿನ ಮನೆ ಸ್ಥಗಿತಗೊಂಡಿದೆ.
ಕೂಸಿನ ಮನೆಯ ಆರೈಕೆದಾರರಿಗೆ ವೇತನ ತಡೆಹಿಡಿದಿರುವುದು ಸರಿಯಲ್ಲ. ರಾಜ್ಯ ಸರ್ಕಾರದ ಬೇರೆ ಯಾವುದಾದರೂ ಯೋಜನೆಯಲ್ಲಿ ಇವರಿಗೆ ವೇತನ ನೀಡುವ ಮೂಲಕ ಕೂಸಿನ ಮನೆ ಪುನಃ ಆರಂಭಿಸಬೇಕು.ಜೀವನಹಳ್ಳಿ ವೆಂಕಟೇಶ, ಡಿಎಸ್‌ಎಸ್ ರಾಜ್ಯ ಸಂಚಾಲಕ