ಕೆಳಮಟ್ಟದ ರಾಜಕಾರಣ ಬಿಡಬೇಕು: ಸಿ.ಟಿ.ರವಿ ವಿರುದ್ಧ ಕಿಡಿ
ಕೋಮು ಭಾವನೆ ಬಿತ್ತಿ 2028ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಹಗಲು ಕನಸನ್ನು ಬಿಜೆಪಿ ಮುಖಂಡರು ಕಾಣುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಮಂಜೇಗೌಡ ಕಿಡಿಕಾರಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳೆ ಮನೆ ಮೇಲೆ ಕಲ್ಲು ತೂರಿದವರ ವಿರುದ್ಧ ಕಠಿಣ ಕ್ರಮ ಆಗಬೇಕು. ಪೊಲೀಸರ ತನಿಖೆಗೆ ಅವಕಾಶ ನೀಡಬೇಕು. ಅದನ್ನು ಬಿಟ್ಟು ದ್ವೇಷ ಭಾವಬಿತ್ತುವ ಮಾತು ಗಳನ್ನು ಆಡಬಾರದೆಂದು ಸಿ.ಟಿ.ರವಿ ವಿರುದ್ಧ ಕಿಡಿಕಾರಿದರು.ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಪುಂಡರ ಹಾವಳಿ ಹೆಚ್ಚಿದೆ. ಸಿ.ಟಿ.ರವಿ ತಮ್ಮ ಶಿಷ್ಯರಿಗೆ ಕಡಿವಾಣ ಹಾಕಬೇಕು. ಕೆಳಮಟ್ಟದ ರಾಜಕಾರಣ ಬಿಡಬೇಕು. ರಾಜಕೀಯ ಬೆಳೆ ಬೇಯಿಸಲು ಈ ರೀತಿ ಕೋಮು ಸಂಘರ್ಷ ಸೃಷ್ಟಿ ಸರಿಯಲ್ಲ ಎಂದರು.
ಶಾಸಕ ಎಚ್.ಡಿ. ತಮ್ಮಯ್ಯ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದು, ಐಜಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರ ಜಿಲ್ಲೆ ಚಿಕ್ಕಮಗಳೂರು ನಗರದಲ್ಲಿ ಕೋಮು ಸಂಘರ್ಷ ನಡೆಯುತ್ತಿದ್ದರೆ ಪ್ರವಾಸಿಗರು ಭಯಭೀತ ರಾಗುತ್ತಾರೆ. ನಗರದಲ್ಲಿ ಶಾಂತಿ ನೆಲೆಸುವಂತೆ ಸರ್ವರೂ ನಡೆದುಕೊಳ್ಳಬೇಕೆಂದು ಹೇಳಿದರು.