ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶುಕ್ರವಾರ ಗುಬ್ಬಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಶೌಚಾಲಯದ ಅಶುಚಿತ್ವ ಹಾಗೂ ಸರಿಯಾದ ನಿರ್ವಹಣೆ ಇಲ್ಲದಿರುವುದು ಗಮನಿಸಿದ ಜಿಲ್ಲಾಧಿಕಾರಿಗಳು, ಶುಚಿತ್ವ ಕಾಪಾಡುವುದು ಹಾಗೂ ರೋಗಿಗಳಿಗೆ ಬಳಸಲಾಗುತ್ತಿರುವ ಬೆಡ್‌ಶೀಟ್‌ಗಳನ್ನು ತಕ್ಷಣ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಸಂಜೆಯೊಳಗೆ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ವೇಳೆ ಸ್ತ್ರೀರೋಗ ತಜ್ಞರು ಹಾಗೂ ಅರಿವಳಿಕೆ ತಜ್ಞರು ಹಾಜರಿದ್ದರು.ಚಿ.ನಾ.ಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ 60 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿರುವ ಚಿಕ್ಕನಾಯಕನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಅಮೃತ್–2 ಯೋಜನೆಯಡಿ ಕೆರೆಯ ಸಮಗ್ರ ಅಭಿವೃದ್ಧಿಗಾಗಿ 1.3 ಮೀಟರ್ ಆಳಕ್ಕೆ ಹೂಳು ತೆಗೆಯುವ ಕಾಮಗಾರಿ, ಕೆರೆಯ ಸುತ್ತಲೂ ತಂತಿಯ ಸುರಕ್ಷಾ ಬೇಲಿ, ಕೆರೆಯ ಏರಿ ಬಲಪಡಿಸುವಿಕೆ ಹಾಗೂ ಒಳಭಾಗದ ಮೇಲ್ಮೈಗೆ ಕಲ್ಲುಕಟ್ಟಡ ನಿರ್ಮಾಣ ಸೇರಿದಂತೆ ಇಡೀ ಕೆರೆ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಈ ಕಾಮಗಾರಿಗಳ ಮೂಲಕ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಮಳೆನೀರು ಸಂರಕ್ಷಣೆ, ಭೂಗರ್ಭ ಜಲಮಟ್ಟ ಏರಿಕೆ ಹಾಗೂ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ. ಅಮೃತ್–2 ಯೋಜನೆಯಡಿಯಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರ ವಿಶ್ರಾಂತಿ ಹಾಗೂ ಮನರಂಜನೆಗೆ ಅನುಕೂಲವಾಗುವಂತೆ ಮೂರು ಉದ್ಯಾನವನಗಳ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿಗಳು ಕಾಮಗಾರಿಗಳ ಗುಣಮಟ್ಟ ಹಾಗೂ ಸಮಯಬದ್ಧ ಪೂರ್ಣಗೊಳಿಸುವಿಕೆಗೆ ಒತ್ತು ನೀಡಿ, ಎಲ್ಲಾ ಕೆಲಸಗಳನ್ನು ನಿಗದಿತ ಮಾನದಂಡಗಳಂತೆ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ತಿಪಟೂರು ಉಪ ವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಮಮತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.