ಇತ್ತೀಚಿನ ದಿನಗಳಲ್ಲಿ ನಗರೀಕರಣ ಹಾಗೂ ಆಧುನೀಕರಣದಿಂದಾಗಿ ನಮ್ಮ ಸಂಸ್ಕೃತಿ ಮರೆಮಾಚಿಹೋಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುನಮ್ಮ ನೆಲದ ಮೂಲ ಸಂಸ್ಕೃತಿ ನಮ್ಮ ಹೆಮ್ಮೆ. ನಮ್ಮ ಸುತ್ತಮುತ್ತಲಿನ ಸಣ್ಣಪುಟ್ಟ ಗ್ರಾಮಗಳಲ್ಲಿ ಹುಟ್ಟಿ ಎಲ್ಲೆಡೆ ಹಬ್ಬಬೇಕಾದ ಸಂಸ್ಕೃತಿಯ ಆಚರಣೆ ವಿರಳವಾಗುತ್ತಿರುವ ಈ ಸಂದರ್ಭದಲ್ಲಿ ಉತ್ತರಾಯಣದಂತಹ ಕೇಂದ್ರದ ಮೂಲಕ ಕಲೆ ಹಾಗೂ ಸಂಸ್ಕೃತಿಯನ್ನು ಬೆಳೆಸುವ, ಅಭಿವ್ಯಕ್ತಪಡಿಸುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಎಂದು ಗಾಂಧಿವಾದಿ ಹೆಗ್ಗೋಡು ಚರಕದ ಸಂಸ್ಥಾಪಕ ಪ್ರಸನ್ನ ಅಭಿಪ್ರಾಯಪಟ್ಟರು.ನಗರದ ಜಗನ್ನಾಥ ಸೆಂಟರ್‌ ಫಾರ್‌ ಆರ್ಟ್‌ ಅಂಡ್‌ ಕಲ್ಚರ್‌ ನಲ್ಲಿ (ಜೆಸಿಎಸಿ) ಶುಕ್ರವಾರ ನಡೆದ ಉತ್ತರಾಯಣ ಕಲಾ ಮತ್ತು ಸಾಂಸ್ಕೃತಿಕ ಹಬ್ಬದ ಮೊದಲ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಗರೀಕರಣ ಹಾಗೂ ಆಧುನೀಕರಣದಿಂದಾಗಿ ನಮ್ಮ ಸಂಸ್ಕೃತಿ ಮರೆಮಾಚಿಹೋಗುತ್ತಿದೆ. ನಮ್ಮ ನಾಡಿನ ಕೀರ್ತಿಯನ್ನು ಕಟ್ಟಿಬೆಳೆಸಿದ ಎಲ್ಲರೂ ತಂತಮ್ಮ ಬೇರನ್ನು ಮರೆತಿರಲಿಲ್ಲ. ಅದರೊಂದಿಗೆ ಸಾಹಿತ್ಯ ಹಾಗೂ ಕಲೆಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದಾಗಿ ಅವರು ಹೇಳಿದರು.ಇದೇ ರೀತಿ ಮೈಸೂರು ನಗರೀಕರಣದತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಕಲೆ ಹಾಗೂ ಸಂಸ್ಕೃತಿ ಎರಡನ್ನೂ ಉಳಿಸಲು ಈ ಕೇಂದ್ರ ಸ್ಥಾಪನೆಯಾಗಿರುವುದು, ಉತ್ತರಾಯಣದಂತಹ ಕಾರ್ಯಕ್ರಮ ನಡೆಯುತ್ತಿರುವುದು ಖುಷಿಯ ಸಂಗತಿ ಎಂದರು.ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, ಭಾಷೆ ಹಾಗೂ ಸಂಸ್ಕೃತಿ ನಮ್ಮ ಹೆಮ್ಮೆ. ದೇಶದ ಹಾಗೂ ವಿಶ್ವದ ವಿವಿಧೆಡೆಗಳಿಂದ ಕರ್ನಾಟಕಕ್ಕೆ ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳು ಬಂದಿವೆ. ಇಲ್ಲಿನ ನೆಲದ ಸಂಸ್ಕೃತಿಯೊಂದಿಗೆ ಅದೂ ಬೆರೆತಿರುವುದೇ ನಮ್ಮ ವೈಶಿಷ್ಟ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಯ ವೇಗ ಬಹಳ ಕಡಿಮೆಯಾಗಿದೆ. ಭಾಷೆ ಎಂದರೆ ಒಂದಿಡೀ ಪ್ರಾಂತ್ಯ, ಸಂಸ್ಕೃತಿಯ ಪ್ರತೀಕ ಎಂದು ಅವರು ಹೇಳಿದರು.ಈ ಸಮಯದಲ್ಲಿ ಉತ್ತರಾಯಣದಂತಹ ಕಾರ್ಯಕ್ರಮಗಳು ನಡೆಯಬೇಕು. ಭಾಷೆಗೆ ಹಾಗೂ ಕಲೆಯ ಅಭಿವೃದ್ಧಿಗೆ ಈ ಸ್ಥಳ ವೇದಿಕೆಯಾಗಬೇಕು ಎಂದು ಹೇಳಿದರು.ಗೌರವ ಅತಿಥಿಯಾಗಿ ಆಗಮಿಸಿದ್ದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ನಮ್ಮ ಪರಂಪರೆ ನಮ್ಮ ಹೆಮ್ಮೆ. ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿರುವ ಯೋಗ ಮೈಸೂರಿನದ್ದೇ ಕೊಡುಗೆ. ಜೊತೆಗೆ ಆಗಿನ ಕಾಲದಲ್ಲಿ ರಾಮಾನುಜಾಚಾರ್ಯರಿಗೆ ಆಶ್ರಯ ಕೊಟ್ಟ ಊರು ನಮ್ಮ ಮೈಸೂರು. ಇಂತಹ ಜಾಗದಲ್ಲಿ ಕಲೆ ಹಾಗೂ ಸಂಸ್ಕೃತಿಯ ಪೋಷಣೆ ಹೆಚ್ಚಾಗಬೇಕು. ಸೂರ್ಯ ತನ್ನ ಪಥವನ್ನು ಬದಲಾಯಿಸುವ ಪುಣ್ಯಕಾಲವಾದ ಉತ್ತರಾಯಣದ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಮೈಸೂರಿನ ಕಲಾ ಹಾಗೂ ಸಾಂಸ್ಕೃತಿಕ ಜಗತ್ತಿನಲ್ಲಿ ಹೊಸ ಭಾಷ್ಯ ಬರೆಯಲಿ ಎಂದು ಅವರು ಹೇಳಿದರು.ಮುಂದಿನ ಆವೃತ್ತಿಗಳಲ್ಲಿ ಮೈಸೂರು ಮಾತ್ರವಲ್ಲದೆ ಬೇರೆ ಬೇರೆ ದೇಶ, ರಾಜ್ಯಗಳ ಜನರು ಇಲ್ಲಿಗೆ ಬಂದು ಕಾರ್ಯಕ್ರಮ ಕಣ್ತುಂಬಿಕೊಳ್ಳುವಂತಾಗಲಿ ಎಂದು ಅವರು ಆಶಿಸಿದರು.ಮಾಜಿ ಆರ್‌ಮತ್ತು ಎಡಬ್ಲ್ಯೂ ಅಧಿಕಾರಿ ರವಿ ಜೋಷಿ, ಹಿರಿಯ ತಾಳವಾದಕ ವಿದ್ವಾನ್‌ ಅನೂರು ಅನಂತಕೃಷ್ಣ ಶರ್ಮ, ಜೆಸಿಎಸಿ ಅಧ್ಯಕ್ಷ ಜಗನ್ನಾಥ ,ಶೆಣೈ, ಕಾರ್ಯಕ್ರಮ ಸಂಯೋಜಕಿ ವಿ. ಮಾನಸ ನಯನ, ಡಾ. ಕೃಪಾ ಫಡ್ಕೆ, ವಿ. ಸಾಯಿ ಶಿವ್‌, ಡಾ. ರಮಾ ವಿ. ಬೆಣ್ಣೂರ್‌ ಮೊದಲಾದವರು ಇದ್ದರು.ವೇದಿಕೆ ಕಾರ್ಯಕ್ರಮದ ಬಳಿಕ ವಿದ್ವಾನ್‌ ಅನೂರ್‌ ಅನಂತಕೃಷ್ಣ ಶರ್ಮ ಮತ್ತು ತಂಡದವರಿಂದ ಲಯ ಲಾವಣ್ಯ ಸಂಗೀತ ಕಾರ್ಯಕ್ರಮ ನಡೆಯಿತು. ಶನಿವಾರ ಉತ್ತರಾಯಣದಲ್ಲಿ ಬೆಳಗ್ಗೆ ಆರ್ಟ್‌ವೇ ಆಫ್‌ ಲೈಫ್‌, ಚೇಂಜಿಂಗ್‌ ಪರ್‌ ಸ್ಪೆಕ್ಟಿವ್‌ಆಫ್‌ ಇಂಡಿಯನ್‌ ಸಿನಿಮಾ ಎಂಬ ವಿಷಯಗಳ ಬಗ್ಗೆ ಸಂಗೀತ ದಿಗ್ಗಜರು ಹಾಗೂ ಸಿನಿಮಾ ದಿಗ್ಗಜರಿಂದ ಚರ್ಚೆ, ಕರ್ನಾಟಿಕ ಮ್ಯೂಸಿಕ್‌ ಹಾಗೂ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ, ಕುಹೂ ಎಂಬ ನಾಟಕ ಪ್ರದರ್ಶನ ಇರುತ್ತದೆ.