ಜಿಲ್ಲಾ ಆಸ್ಪತ್ರೆಗೆ ಡಿಸಿ ದೀಡೀರ್‌ ಭೇಟಿ ಪರಿಶೀಲನೆ

KannadaprabhaNewsNetwork |  
Published : Jun 14, 2024, 01:07 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಗುರುವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಇಲ್ಲಿನ ಶೌಚಾಲಯ ಕಂಡು ಇದೇನ್ರೀ ಗಬ್ಬು ವಾಸನೆ ಬರುತ್ತಿದೆ. ನಾವು ನೀವು ಯಾರಾದ್ರೂ ಹೋಗೋಕೆ ಆಗುತ್ತಾ, ರೋಗಿಗಳು ಹೇಗ್ರಿ ಬಳಸ್ತಾರೆ. ಮೊದಲು ಇದನ್ನು ಕ್ಲೀನ್ ಮಾಡಿಸಿ ಎಂದು ಅಲ್ಲಿನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೊರಸೂಸುತ್ತಿದ್ದ ಕೆಟ್ಟ ವಾಸನೆಗೆ ತೀವ್ರ ಅಸಮಧಾನಗೊಂಡ ಅವರು ಮೊದಲು ಶೌಚಾಲಯಗಳ ಸರಿಯಾಗಿ ನಿರ್ವಹಣೆಮಾಡಿ. ಅರ್ಧ ರೋಗಗಳು ಕಡಿಮೆಯಾಗುತ್ತವೆ ಎಂದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಸ್ವತಃ ತಾವೇ ಗುರುವಾರ ಖುದ್ದಾಗಿ ರೋಗಿಗಳ ವಾರ್ಡ್‍ಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸುವುದರ ಜೊತೆಗೆ ಅಲ್ಲಿ ನೀಡುತ್ತಿರುವ ಚಿಕಿತ್ಸಾ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಜಿಲ್ಲಾಸ್ಪತ್ರೆಯ ಕಾರ್ಯವೈಖರಿ, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ವೈದ್ಯರು ಹಾಗೂ ರೋಗಿಗಳಿಂದ ಆಸ್ಪತ್ರೆಯ ಕುರಿತು ಮಾಹಿತಿ ಪಡೆದರು. ಆಸ್ಪತ್ರೆಯ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿನ ಔಷಧಿ ವಿತರಿಸುವ ಸ್ಥಳ, ಚುಚ್ಚುಮದ್ದು ನೀಡುವ ಕೊಠಡಿ ಸಹಾಯ ಕೇಂದ್ರ, ಎಂಎಲ್‍ಸಿ ವಿಭಾಗ, ಹೊರರೋಗಿಗಳ ವಿಭಾಗದ ಅರ್ಥೋಪೆಡಿಕ್ ಒಪಿಡಿ, ಸರ್ಜಿಕಲ್ ಒಪಿಡಿ, ಡ್ರೆಸಿಂಗ್ ರೂಂ, ಫಿಜಿಯೋಥೆರಪಿ, ತುರ್ತು ಚಿಕಿತ್ಸಾ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ಕಣ್ಣಿನ ಶಸ್ತ್ರಚಿಕಿತ್ಸಾ ವಿಭಾಗ, ಹೈಟೆಕ್ ಲ್ಯಾಬ್, ಹಿರಿಯ ನಾಗರಿಕರ ವಾರ್ಡ್, ಡಯಾಲಿಸಿಸ್ ವಿಭಾಗ, ಮಕ್ಕಳ ಮತ್ತು ನವಜಾತ ಶಿಶು ವಿಭಾಗ, ರಕ್ತನಿಧಿ ಕೇಂದ್ರ ಹಾಗೂ ಅಡುಗೆ ಮನೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಕುರಿತು ವೀಕ್ಷಣೆ ಮಾಡಿದರು. ಆಸ್ಪತ್ರೆಯಲ್ಲಿನ ಶೌಚಾಲಯ ಸ್ವಚ್ಚತೆ ಕುರಿತು ಹೆಚ್ಚಿನ ದೂರುಗಳು ಕೇಳಿಬರುತ್ತವೆ. ಹೀಗಾಗಿ ಶೌಚಾಲಯವನ್ನು ಪ್ರತಿನಿತ್ಯ ನಿಯಮಿತವಾಗಿ ಸ್ವಚ್ಛವಾಗಿರಿಸಲು ತಾಕೀತು ಮಾಡಿದರು.

ಜಿಲ್ಲಾಸ್ಪತ್ರೆಯಲ್ಲಿ ವಿಕಲಚೇತನರಿಗೆ ಅಂಗವೈಕಲ್ಯ ಕುರಿತು ವೈದ್ಯಕೀಯ ಪರೀಕ್ಷೆ ನಡೆಸಿ, ಗುರುತಿನ ಚೀಟಿ ನೀಡುವ ಸಂದರ್ಭದಲ್ಲಿ ಏಕ ವೈದ್ಯರ ತಂಡ ಕಾರ್ಯನಿರ್ವಹಿಸಬಾರದು. ನಿಯಮಾನುಸಾರ ತಜ್ಞ ವೈದ್ಯರ ತಂಡವು ಪರಿಶೀಲಿಸಿಯೇ ವೈದ್ಯಕೀಯ ಪ್ರಮಾಣಪತ್ರ ಹಾಗೂ ಗುರುತಿನ ಪತ್ರ ನೀಡಬೇಕು ಎಂದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆಗೆ ಸಂಬಂಧಪಟ್ಟಂತೆ ದೂರುಗಳು ಬಂದ ಹಿನ್ನಲೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಮಧ್ಯ ಕರ್ನಾಟಕ ಭಾಗದ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಈ ಆಸ್ಪತ್ರೆಗೆ ಆಗಮಿಸುತ್ತಾರೆ. ಹಾಗಾಗಿ ಆಸ್ಪತ್ರೆಗೆ ಅಗತ್ಯವಿರುವ ಕೆಲವು ಮೂಲಸೌಕರ್ಯಗಳ ಅವಶ್ಯಕತೆ ಇದೆ. ಡಿಎಂಎಫ್ ಹಾಗೂ ಕೆಎಂಇಆರ್‌ಸಿ ಅನುದಾನದಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು ಹಾಗೂ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಯ ಎಲ್ಲಾ ವಿಭಾಗಗಳಲ್ಲಿಯೂ ಸಿಬ್ಬಂದಿ ಸಮರ್ಪಕವಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ದೂರು ಬಾರದಂತೆ ರೋಗಿಗಳಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ದೌರ್ಜನ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಕರಣಗಳನ್ನು ನಿಯಮಾನುಸಾರ ಮಾಡಬೇಕು, ಆದರೆ ನಿಯಮ ವಿರುದ್ಧವಾಗಿ ಮತ್ತು ಅನಗತ್ಯವಾಗಿ ಎಂಎಲ್‍ಸಿ (ಮೆಡಿಕಲ್‌ ಲೀಗಲ್‌ ಕೇಸ್‌) ಮಾಡದಂತೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್, ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿಶೇಷ ವೈದ್ಯಾಧಿಕಾರಿ ಡಾ.ಯುವರಾಜ್ ಸೇರಿದಂತೆ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ