ಪವಿತ್ರಾ ಗೌಡ ಕೊಲೆಗಾರ್ತಿ ಅಲ್ಲ: ಮಾಜಿ ಪತಿ ಸಿಂಗ್‌

KannadaprabhaNewsNetwork |  
Published : Jun 14, 2024, 01:07 AM ISTUpdated : Jun 14, 2024, 12:13 PM IST
Pavitra Gowda

ಸಾರಾಂಶ

‘ಪವಿತ್ರಾ ಮಹತ್ವಾಕಾಂಕ್ಷೆ ಇರುವ ಹೆಣ್ಣುಮಗಳು. ತನಗೆ ಕೆಟ್ಟದಾಗಿ ಮೆಸೇಜ್‌ ಬಂದಿದ್ದನ್ನು ತನ್ನ ಗಂಡನ (ದರ್ಶನ್‌) ಬಳಿ ಹೇಳಿಕೊಂಡಿದ್ದಾಳೆ. ಅದು ಸಹಜ ತಾನೇ? ಆದರೆ ಆಕೆ ಕೊಲೆ ಮಾಡುವಂಥವಳಲ್ಲ’ ಎಂದು ಪವಿತ್ರಾ ಮಾಜಿ ಪತಿ ಸಂಜಯ್‌ ಸಿಂಗ್‌ ಹೇಳಿದ್ದಾರೆ.

  ಬೆಂಗಳೂರು: ‘ಪವಿತ್ರಾ ಮಹತ್ವಾಕಾಂಕ್ಷೆ ಇರುವ ಹೆಣ್ಣುಮಗಳು. ತನಗೆ ಕೆಟ್ಟದಾಗಿ ಮೆಸೇಜ್‌ ಬಂದಿದ್ದನ್ನು ತನ್ನ ಗಂಡನ (ದರ್ಶನ್‌) ಬಳಿ ಹೇಳಿಕೊಂಡಿದ್ದಾಳೆ. ಅದು ಸಹಜ ತಾನೇ? ಆದರೆ ಆಕೆ ಕೊಲೆ ಮಾಡುವಂಥವಳಲ್ಲ’ ಎಂದು ಪವಿತ್ರಾ ಮಾಜಿ ಪತಿ ಸಂಜಯ್‌ ಸಿಂಗ್‌ ಹೇಳಿದ್ದಾರೆ.

‘ನಾನಿಂದು ಮಾಧ್ಯಮದ ಮುಂದೆ ಬರಲು ಕಾರಣ ನಮ್ಮ ಮಗಳು. ಇನ್ನೂ ಜಗತ್ತೇನೆಂದು ತಿಳಿಯದ ಅವಳನ್ನು ದಯವಿಟ್ಟು ಈ ವಿಚಾರಕ್ಕೆ ಎಳೆದು ತರಬೇಡಿ’ ಎಂದು ಮನವಿ ಮಾಡಿದ್ದಾರೆ.

‘ನನಗೆ ದರ್ಶನ್‌ ಬಗ್ಗೆ ಯಾವ ವಿಚಾರವೂ ತಿಳಿದಿಲ್ಲ. ಆದರೆ ಅವರಿಗೂ ಇಲ್ಲಿ ಕೊಲೆ ಮಾಡುವ ಉದ್ದೇಶ ಇರಲಿಕ್ಕಿಲ್ಲ ಎಂದೇ ತೋರುತ್ತದೆ. ಇನ್ನು ಪವಿತ್ರಾ ತನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್‌ ಮಾಡಿದವನಿಗೆ ಎರಡೇಟು ಹೊಡೆದಿರಬಹುದೇ ಹೊರತು ಕೊಲೆಯಂಥಾ ಕೃತ್ಯಕ್ಕೆ ಇಳಿಯಲು ಸಾಧ್ಯವಿಲ್ಲ. ಆಕೆಗೆ ಸಿನಿಮಾ ರಂಗಕ್ಕೆ ಹೋಗಬೇಕು, ಬಿಸಿನೆಸ್ ವುಮೆನ್ ಆಗಬೇಕು, ಫ್ಯಾಷನ್ ಕ್ಷೇತ್ರದಲ್ಲಿ ಹೆಸರು ಮಾಡಬೇಕು ಎಂಬ ಆಸೆಗಳಿದ್ದವು’ ಎಂದು ಸಂಜಯ್‌ ಸಿಂಗ್‌ ಹೇಳಿದ್ದಾರೆ. ಪವಿತ್ರಾ ಜತೆ ನನ್ನ ಪ್ರೇಮ ಹೀಗಾಯ್ತು:

ಈ ಸಂದರ್ಭದಲ್ಲಿ ತಮ್ಮ ವೈಯುಕ್ತಿಕ ಬದುಕಿನ ವಿವರಗಳನ್ನೂ ಅವರು ನೀಡಿದ್ದಾರೆ. ‘ನಾನು ಹುಟ್ಟಿದ್ದು ಉತ್ತರ ಪ್ರದೇಶದಲ್ಲಿ. ಬೆಳೆದದ್ದು ವಿಶಾಖಪಟ್ಟಣಂನಲ್ಲಿ. ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದೆ. ಪವಿತ್ರಾ ಗೌಡ ಮತ್ತು ನಾನು ಒಂದೇ ಏರಿಯಾದಲ್ಲಿದ್ದೆವು. ನಮ್ಮ ನಡುವೆ ಪರಿಚಯವಾಯಿತು. ಸ್ನೇಹ, ಪ್ರೇಮವೂ ಆಗಿ ಮನೆಯವರ ಒಪ್ಪಿಗೆ ಪಡೆದು 2007ರಲ್ಲಿ ಮದುವೆ ಆದೆವು. 2009ರಲ್ಲಿ ಮಗಳು ಹುಟ್ಟಿದಳು. ಆ ಬಳಿಕ ನಮ್ಮ ವೃತ್ತಿಯ ಕಾರಣಕ್ಕೆ ಇಬ್ಬರಿಗೂ ಪರಸ್ಪರ ಸಮಯ ಕೊಡುವುದು ಸಾಧ್ಯವಾಗುತ್ತಿರಲಿಲ್ಲ. ಈ ವಿಚಾರಕ್ಕೆ ಮನಸ್ತಾಪ ಬಂದು ಇಬ್ಬರೂ ದೂರವಾಗುವ ನಿರ್ಧಾರ ಕೈಗೊಂಡೆವು. 2013ರಲ್ಲಿ ಕಾನೂನು ರೀತ್ಯಾ ಡಿವೋರ್ಸ್‌ ಪಡೆದೆವು. ಆ ಬಳಿಕ ಮಗಳ ಜೊತೆ ನಾನು ಅಪರೂಪಕ್ಕೆ ಮಾತನಾಡುತ್ತಿದ್ದೆ. 2017ರಲ್ಲಿ ಅವಳಿಗಾಗಿ ಬೆಂಗಳೂರಿಗೆ ಬಂದು ಭೇಟಿಯೂ ಆದೆ’ ಎಂದು ತಿಳಿಸಿದ್ದಾರೆ.

‘ಮಗಳ ಸ್ವಭಾವವೂ ನನ್ನಂತೆ ನೇರ. ಬೇಗ ಸಿಟ್ಟೂ ಬರುತ್ತದೆ. ಅವಳಿಗೆ ಡಿಸ್ಟರ್ಬ್‌ ಮಾಡುವುದು ನನಗಿಷ್ಟವಿಲ್ಲ. ಈ ಕಾರಣಕ್ಕೆ ಅವಳಿಗೆ ಕರೆ ಮಾಡಿಲ್ಲ. ಪವಿತ್ರಾ ಆಕೆಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂಬ ನಂಬಿಕೆ ನನಗಿದೆ. ಆದರೆ ಈ ಪ್ರಕರಣದಲ್ಲಿ ಅವಳ ಹೆಸರು ತರುವುದು ನನಗೆ ಇಷ್ಟವಿಲ್ಲ. ನಮ್ಮ ಹೆಸರಿಗೆ ಎಂಥಾ ಕಳಂಕ ತಂದರೂ ಸಹಿಸುತ್ತೇನೆ. ಆದರೆ ಏನೂ ಅರಿಯದ ಆ ಮುಗ್ಧ ಜೀವಕ್ಕೆ ನೋವು ನೀಡದಿರಿ. ಹೆಣ್ಣುಮಕ್ಕಳ ಬಗ್ಗೆ ಯಾರೂ ಕೆಟ್ಟದಾಗಿ ನಡೆದುಕೊಳ್ಳಬೇಡಿ’ ಎಂದು ಮನವಿ ಮಾಡಿದ್ದಾರೆ.

‘ನಾನು ಸದ್ಯ ಉತ್ತರಪ್ರದೇಶದಲ್ಲಿದ್ದೇನೆ. ನನ್ನ ಮಗಳಿಗೆ ಪಾಠ ಕಲಿಸಲು ಆಗಲಿಲ್ಲ. ಇಲ್ಲಿ ಅವಳಂಥಾ ಸಾವಿರಾರು ಮಕ್ಕಳಿಗೆ ಕಂಪ್ಯೂಟರ್‌ ಸೈನ್ಸ್‌ ಮತ್ತು ಇಂಗ್ಲಿಷ್‌ ಕಲಿಸುತ್ತಿದ್ದೇನೆ. ಮಗಳು ತನ್ನ ತಾಯಿ ಜೊತೆಗೆ ಚೆನ್ನಾಗಿ ಬದುಕುತ್ತಿದ್ದಾಳೆ ಎಂಬ ನಂಬಿಕೆ ಇದೆ’ ಎಂದೂ ಅವರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ