ಜಂಟಿ ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ಒದಗಿಸಲು ಡಿಸಿ ಸೂಚನೆ

KannadaprabhaNewsNetwork |  
Published : Nov 18, 2026, 02:15 AM IST
ಫೋಟೋ ಶೀರ್ಷಿಕೆ: ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಬೆಳೆ ಕಟಾವು ಪ್ರಯೋಗ ಹಾಗೂ ಬೆಳೆ ವಿಮೆ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಮಾತನಾಡಿದರು. ಅಧಿಕಾರಿಗಳು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಈಶಾನ್ಯ ಮುಂಗಾರು ಅವಧಿಯಲ್ಲಿ ಶೇ. 88ರಷ್ಟು ಮಳೆ ಕೊರತೆಯಾಗಿದ್ದು, ಕಡಲೆ ಮತ್ತು ಹಿಂಗಾರು ಜೋಳ ಬೆಳೆಗಳಿಗೆ ಹಿನ್ನಡೆಯಾಗಿದೆ.

ಈಶಾನ್ಯ ಮುಂಗಾರು ಶೇ. 88ರಷ್ಟು ಮಳೆ ಕೊರತೆಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯಲ್ಲಿ ಈಶಾನ್ಯ ಮುಂಗಾರು ಅವಧಿಯಲ್ಲಿ ಶೇ. 88ರಷ್ಟು ಮಳೆ ಕೊರತೆಯಾಗಿದ್ದು, ಕಡಲೆ ಮತ್ತು ಹಿಂಗಾರು ಜೋಳ ಬೆಳೆಗಳಿಗೆ ಹಿನ್ನಡೆಯಾಗಿದೆ. ಹೀಗಾಗಿ ಬಿತ್ತನೆ ವೈಫಲ್ಯ ಹಾಗೂ ಮಧ್ಯ ಹಂಗಾಮಿನ ಪ್ರತಿಕೂಲತೆ ಕುರಿತು ಸಂಬಂಧಿಸಿದ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ, ಕಾಲಮಿತಿಯೊಳಗೆ ವರದಿ ಸಲ್ಲಿಸುವ ಮೂಲಕ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ದೊರಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೆಳೆ ಕಟಾವು ಪ್ರಯೋಗ ಹಾಗೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಬಾಕಿ ಇರುವ ಬೆಳೆ ಕಟಾವು ಪ್ರಯೋಗಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ವಿಮೆ ಪರಿಹಾರ ಪಡೆಯಲು ಅರ್ಹರಾದ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಬೆಳೆ ವಿಮೆ ಕುರಿತು ಪತ್ರಿಕೆಗಳ ಮೂಲಕ ರೈತರಿಗೆ ವ್ಯಾಪಕ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಶೇ. 88ರಷ್ಟು ಮಳೆ ಕೊರತೆ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನ.15ರ ವರದಿಯಂತೆ, ಅ.1ರಿಂದ ನ.15ರವರೆಗೆ ಜಿಲ್ಲೆಯಲ್ಲಿ 127.7 ಮಿ.ಮೀ. ವಾಡಿಕೆ ಮಳೆಗೆ ಬದಲಾಗಿ ಕೇವಲ 15.2 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲೂ ಶೇ.84ಕ್ಕಿಂತ ಹೆಚ್ಚು ಮಳೆ ಕೊರತೆ ದಾಖಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ಜಿ.ಡಿ. ಸಭೆಗೆ ಮಾಹಿತಿ ನೀಡಿದರು.ಹಿಂಗಾರು ಹಂಗಾಮಿನಲ್ಲಿ 1.70 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ ನ.13ರವರೆಗೆ 1.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ, ಹಿಂಗಾರು ಜೋಳದ 25,950 ಹೆಕ್ಟೇರ್ ಗುರಿಯಲ್ಲಿ ಕೇವಲ 10,855 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದರು.ಬಿತ್ತನೆ ವೈಫಲ್ಯ ವಿಕೋಪದಡಿ ಅರ್ಹ ರೈತರಿಗೆ ವಿಮಾ ಮೊತ್ತದ ಗರಿಷ್ಠ ಶೇ.25ರಷ್ಟು ಪರಿಹಾರ ನೀಡಲು ಅವಕಾಶವಿದೆ. ಮಧ್ಯ ಹಂಗಾಮಿನ ಪ್ರತಿಕೂಲತೆ ಉಂಟಾದಲ್ಲಿ ಅಂದಾಜು ಪರಿಹಾರದ ಶೇ.25ರಷ್ಟನ್ನು ಮುಂಗಡವಾಗಿ ಪಾವತಿಸುವ ಅವಕಾಶವೂ ಇದೆ. ಬೆಳೆ ವಿಮೆಗೆ ನೋಂದಾಯಿಸಿಕೊಂಡ ರೈತರಿಗೆ ಮಾತ್ರ ಈ ಸೌಲಭ್ಯ ಅನ್ವಯಿಸುತ್ತದೆ ಎಂದು ತಿಳಿಸಿದರು.ವಿಮೆಗೆ ನೋಂದಣಿಗೆ ಕಾಲಾವಕಾಶ: 2026-27ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆ ವಿಮೆ ನೋಂದಣಿ ಇಫ್ಕೋ ಟೋಕಿಯೊ ವಿಮಾ ಕಂಪನಿಯ ಮೂಲಕ ನಡೆಯುತ್ತಿದೆ. ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ ಹಾಗೂ ಕುಸುಬೆ ಬೆಳೆಗಳಿಗೆ ನ.30, ಗೋಧಿಗೆ ಡಿ.15, ಕಡಲೆಗೆ ಡಿ.31 ಹಾಗೂ ಶೇಂಗಾ ಮತ್ತು ಭತ್ತಕ್ಕೆ 2027ರ ಫೆ.26 ಕೊನೆಯ ದಿನವಾಗಿದೆ.

ರೈತರು ಬ್ಯಾಂಕ್, ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಫ್ರೂಟ್ಸ್ ಐಡಿ, ಪಹಣಿ, ಆಧಾರ್ ಮತ್ತು ಬ್ಯಾಂಕ್ ಪಾಸ್‌ಬುಕ್ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಅಥವಾ 1800 103 5490 ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮಹೆಬೂಬ್ ಜೀಲಾನ್ ಖುರೇಶಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ
ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ