ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಜಿಲ್ಲೆಗೆ ಸುಗ್ಗಿ ಮಾಡಲು ಬಂದಿದ್ದರು. ಕಳೆದ 3 ವರ್ಷಗಳಲ್ಲಿ ಅವರ ಸುಗ್ಗಿ ಚೆನ್ನಾಗಿ ಆಗಿದ್ದು, ಅದನ್ನು ಮುಗಿಸಿರುವ ಸಂಭ್ರಮಕ್ಕಾಗಿ ಅವರು ಸರ್ಕಾರಿ ಕಟ್ಟಡದಲ್ಲಿಯೇ ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಗದಗ
ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಜಿಲ್ಲೆಗೆ ಸುಗ್ಗಿ ಮಾಡಲು ಬಂದಿದ್ದರು. ಕಳೆದ 3 ವರ್ಷಗಳಲ್ಲಿ ಅವರ ಸುಗ್ಗಿ ಚೆನ್ನಾಗಿ ಆಗಿದ್ದು, ಅದನ್ನು ಮುಗಿಸಿರುವ ಸಂಭ್ರಮಕ್ಕಾಗಿ ಅವರು ಸರ್ಕಾರಿ ಕಟ್ಟಡದಲ್ಲಿಯೇ ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ. ಅವರೊಂದಿಗೆ ಕುಣಿದ ಅಧಿಕಾರಿಗಳೆಲ್ಲರೂ ಈ ಸುಗ್ಗಿಯ ಪಾಲುದಾರರಾಗಿದ್ದಾರೆ ಎಂದು ನರಗುಂದ ಶಾಸಕ ಹಾಗೂ ಮಾಜಿ ಸಚಿವ ಸಿ.ಸಿ. ಪಾಟೀಲ ಆರೋಪಿಸಿದರು.
ಸೋಮವಾರ ಗದಗ ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತಿ ಹೊಂದುತ್ತಿರುವ ಜಿಲ್ಲಾಧಿಕಾರಿಗಳ ಬೀಳ್ಕೊಡುಗೆ ಪಾರ್ಟಿ ಹಾಗೂ ಅವರ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಪ್ರಕರಣದ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ನಿವೃತ್ತಿ ಸಂದರ್ಭ ಔತಣಕೂಟ ಏರ್ಪಡಿಸುವುದು ಸಾಮಾನ್ಯ ಪದ್ಧತಿ. ಆದರೆ, ಇತಿಮಿತಿಯಲ್ಲಿ ಹೇಗೆ ಆಚರಿಸಬೇಕು ಹಾಗೂ ಸಾರ್ವಜನಿಕರ ಮುಂದೆ ಹೇಗಿರಬೇಕು ಎಂಬ ಕನಿಷ್ಠ ಜ್ಞಾನವೂ ಸಿ.ಎನ್. ಶ್ರೀಧರ್ ಅವರಿಗೆ ಇಲ್ಲ. ಈ ಘಟನೆಯಿಂದ ರಾಜ್ಯದ ಮುಂದೆ ಗದಗ ಜಿಲ್ಲೆಯ ಗೌರವ ಹಾಗೂ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದಂತಾಗಿದೆ ಎಂದು ಪಾಟೀಲ ಕಿಡಿಕಾರಿದರು. ಪಾರ್ಟಿಗೂ ಮುನ್ನ ಏನಾದರೂ ವಿಶೇಷ ವ್ಯವಸ್ಥೆ ಮಾಡಲಾಗಿತ್ತೇ ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಈ ಕುರಿತು ಹೆಚ್ಚಿನ ಚಿತ್ರಗಳು ಸಿಕ್ಕರೆ ಮತ್ತೆ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಾರ್ಯವೈಖರಿಯನ್ನು ಟೀಕಿಸಿದ ಅವರು, ಜಿಲ್ಲಾ ದಂಡಾಧಿಕಾರಿಗಳ ಫೋನ್ 24 ಗಂಟೆಯೂ ಲಭ್ಯವಿರಬೇಕು. ಆದರೆ ಡಿಸಿ ಅವರು ಮಾಧ್ಯಮಗಳಿಗೆ ಸಮಯ ನೀಡುತ್ತಿರಲಿಲ್ಲ, ಜನಪ್ರತಿನಿಧಿಗಳು ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ಈ ಬಗ್ಗೆ ಸರ್ಕಾರದ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದೆ. ಬೆಳೆ ವಿಮೆ ವಿಚಾರದಲ್ಲಿ ರೈತರೊಂದಿಗೆ ಅವರು ನಡೆದುಕೊಂಡ ರೀತಿ ಎಲ್ಲರಿಗೂ ತಿಳಿದಿದ್ದು, ಹೋರಾಟ ತೀವ್ರಗೊಂಡಾಗ ಕ್ಷಮೆ ಕೇಳಿದ್ದರು. ಇಂತಹ ಅಧಿಕಾರಿಯಿಂದ ಸರ್ಕಾರಕ್ಕೆ ನಾಚಿಕೆಯಾಗಬೇಕು. ಜನರಿಗೆ ಸ್ಪಂದಿಸುವಂತೆ ಯಾವ ಕಾಂಗ್ರೆಸ್ ನಾಯಕರೂ ಅವರಿಗೆ ಸೂಚಿಸದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಡಿಸಿ ಕಚೇರಿಯ ಒಂದೊಂದು ಕಲ್ಲೂ ಕೂಡಾ ಭ್ರಷ್ಟಾಚಾರದ ಕಥೆ ಹೇಳುತ್ತದೆ ಇದರ ಬಗ್ಗೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲವೇ? ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಇವರ ನಿವೃತ್ತಿಯಿಂದ ಗದಗ ಜಿಲ್ಲೆಗೆ ತಗುಲಿದ್ದ ಅನಿಷ್ಟ ತೊಲಗಿದೆ ಎಂದು ಟೀಕಿಸಿದರು. ಅಲ್ಲದೆ, ಇವರು ಗದಗ ಜಿಲ್ಲಾಧಿಕಾರಿಯಾದಾಗಿನಿಂದ ಇಲ್ಲಿಯವರೆಗೂ ಮಾಡಿದ ಘನ ಕಾರ್ಯಗಳ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಹಿರಿಯ ನಾಯಕ ಎಚ್.ಕೆ. ಪಾಟೀಲ ಅವರು ಔತಣ ಕೂಟಕ್ಕೆ ಹೋದ ಸಂದರ್ಭದಲ್ಲಿ ಡ್ಯಾನ್ಸ್ ಮಾಡಿಲ್ಲ ಎಂಬುದೇ ಸಮಾಧಾನದ ಸಂಗತಿ, ಆದರೆ ಎಚ್.ಕೆ.ಪಾಟೀಲರು ಅಧಿಕಾರಿಗಳಿಗೆ ಬರಗಾಲದಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿ ಬರಬೇಕಿತ್ತು ಎಂದು ಸಿ.ಸಿ. ಪಾಟೀಲ ಅಭಿಪ್ರಾಯಪಟ್ಟರು.
ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮುಂದೆ ನಡೆಯುವ ಕೆಡಿಪಿ ಸಭೆಯಲ್ಲಿ ಪಾರ್ಟಿಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.