ಕನ್ನಡಪ್ರಭ ವಾರ್ತೆ, ತುಮಕೂರುಕಿವುಡ-ಮೂಕರಿಗೆ ಸರ್ಕಾರಿ ಯೋಜನೆಯನ್ನು ಸಿಗುವಂತೆ ಮಾಡಲು ಅಂತಹ ವಿಕಲಚೇತನರಿಗೆ ಅರ್ಥವಾಗುವ ಭಾಷೆಯಲ್ಲಿ ಅಂದರೆ ಸನ್ನೆ ನುಡಿಯಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಆಧಾರ್ ಯೋಜನೆ ಫಲಾನುಭವಿಗಳ ಆಯ್ಕೆ ಸಮಿತಿಯಲ್ಲಿ ಅವರು ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಅಭಿವೃದ್ಧಿ ಇಲಾಖೆ ಈಗಾಗಲೇ ಮಾಡಿರುವ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸಮಾಧಾನ ತಂದಿರುವುದಿಲ್ಲ. ಅಂಧರು, ಕಿವುಡ, ಮೂಕರು ಸೇರಿದಂತೆ ವಿಕಲಚೇತನ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕ್ರಮ ಸರಿಯಿಲ್ಲ ಎಂದ ಅವರು, ವಿಶೇಷ ಚೇತನರ ಸ್ವ-ಉದ್ಯೋಗ ಇತರೆ ಸರ್ಕಾರಿ ಸೌಲಭ್ಯ ಅರ್ಹರಿಗೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ಅವರ ಭಾಷೆಯಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ಅರ್ಹರಿಗೆ ಸೌಲಭ್ಯ ಸಿಗುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಮಟ್ಟದ ಹಾಗೂ ತಾಲೂಕು ಮಟ್ಟದ ಸ್ವಯಂ ಸೇವಕರನ್ನು ಇದಕ್ಕಾಗಿಯೇ ನೇಮಿಸಿಕೊಳ್ಳಲಾಗಿದೆ. ಅಲ್ಲದೆ, ವಿಶೇಷ ಚೇತನರ ಕಲ್ಯಾಣಕ್ಕಾಗಿಯೇ ಸರ್ಕಾರೇತರ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ. ಇವರ ಮೂಲಕ ಹಾಗೂ ಕಿವುಡ-ಮೂಕರಿಗೆ ಸನ್ನೆ ನುಡಿ, ಅಂಧರಿಗೆ ಶ್ರವ್ಯ ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ಫಲಾನುಭವಿಗಳು ಪುನರಾವರ್ತನೆಯಾಗದಂತೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ಕ್ರಮವಹಿಸುವಂತೆ ಅವರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ವಿಕಲಚೇತನರ ಅಧಿಕಾರಿ ಚಿದಾನಂದಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಚೇತನ್ ಕಂಚಿಬೈಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.