ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿಕೊಟ್ಟು ವಿವಿಧ ಶಾಖೆಗಳ ಕಾರ್ಯ ನಿರ್ವಹಣೆ, ಕಡತ ವಿಲೇವಾರಿ ಪ್ರಗತಿ, ಸಿಬ್ಬಂದಿ ಹಾಜರಾತಿ ಹಾಗೂ ಸಾರ್ವಜನಿಕ ಸೇವೆಗಳ ಅನುಷ್ಠಾನ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿ, ಇ- ಆಫೀಸ್ ಅನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿದ್ದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಹಸೀಲ್ದಾರ್ ಗೆ ಎಚ್ಚರಿಕೆ ನೀಡಿದರು.
ಸರ್ಕಾರದ ಆಧುನೀಕರಣ ಹಾಜರಾತಿ ವ್ಯವಸ್ಥೆಯ ಕರ್ತವ್ಯ ಆ್ಯಪ್ ಅನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಂಡು ಇ-ಹಾಜರಾತಿಯನ್ನು ದಾಖಲಿಸಬೇಕು, ತಾಲೂಕಿನಲ್ಲಿ ಇನ್ನೂ 26,188 ಇ- ಪೌತಿ ಖಾತೆ ಪ್ರಕರಣಗಳು ಬಾಕಿ ಇವೆ. ತುರ್ತಾಗಿ ಕಾನೂನುಬದ್ಧ ವಾರಸುದಾರರಿಗೆ ಖಾತೆ ಬದಲಾವಣೆ ಮಾಡಬೇಕು ಎಂದರು.48,392 ಆಧಾರ್ ಸೀಡಿಂಗ್ ಬಾಕಿಯಿದ್ದು, ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಬಾಕಿಯಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಅಭಿಲೇಖಾಲಯ ಶಾಖೆಯ ದಾಖಲೆ ನಿರ್ವಹಣೆ ಹಾಗೂ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಸರ್ಕಾರಕ್ಕೆ ನಿಗದಿತ ಶುಲ್ಕವನ್ನು ಕಡ್ಡಾಯವಾಗಿ ವಸೂಲಿಸಿ ದಾಖಲೆಗಳನ್ನು ಸಮರ್ಪಕವಾಗಿ ಸಂರಕ್ಷಿಸುವಂತೆ ಕರೆ ನೀಡಿದರು.
ಆದಾಯ, ಜಾತಿ, ವಾಸ, ವಂಶವೃಕ್ಷ, ಭೂಹಿಡುವಳಿ ಪ್ರಮಾಣಪತ್ರ ಸೇರಿ ಎಲ್ಲಾ ಸೇವೆಗಳನ್ನು ಸಕಾಲ ಯೋಜನೆಯಡಿ ನಿಗದಿತ ಅವಧಿಯಲ್ಲಿಯೇ ಪ್ರಮಾಣ ಪತ್ರವನ್ನು ಅರ್ಜಿದಾರರಿಗೆ ನೀಡಬೇಕು. ವಿಳಂಬ ಮತ್ತು ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೋಬಳಿ ಮಟ್ಟದ ಸಿಬ್ಬಂದಿ ಕೇಂದ್ರಸ್ಥಾನದಲ್ಲಿಯೇ ಲಭ್ಯವಿರಬೇಕು. ಸಾರ್ವಜನಿಕರ ಮನವಿಗಳಿಗೆ ತ್ವರಿತ ಸ್ಪಂದನೆ ನೀಡಬೇಕು, ಕಚೇರಿ ಶಿಸ್ತು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.