ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿಕಲಚೇತನರೊಬ್ಬರಿಗೆ ಬಹು ವರ್ಷಗಳಿಂದ ಆಧಾರ್ ಕಾರ್ಡ್ ಪಡೆಯಲು ತೊಡಕಾಗಿದ್ದ ಸಮಸ್ಯೆಯನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಪರಿಹರಿಸಿ ಆಧಾರ್ ಕಾರ್ಡ್ ವಿತರಿಸಿದ್ದಾರೆ. ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿಯ ಭಾಗ್ಯ ಎಂಬುವವರು ಅಂಧರಾಗಿದ್ದು ಆಧಾರ್ ಕಾರ್ಡ್ ಪಡೆಯುವ ಸಲುವಾಗಿ ನಡೆಸುವ ಕಣ್ಣಿನ ಪೂರ್ವ ತಪಾಸಣೆ ಸಂದರ್ಭದಲ್ಲಿ ಕಣ್ಣಿನ ತೊಂದರೆಯಿಂದ ಏರಿಳಿತವಾಗುತ್ತಿದ್ದರಿಂದ ಇವರಿಗೆ ಕಾರ್ಡ್ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.ಕಳೆದ ೨೦೨೪ರ ಡಿ.೧೯ರಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅದ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ವಿಕಲಚೇತನರ ಕುಂದುಕೊರತೆ ಸಭೆಯಲ್ಲಿ ಭಾಗ್ಯ ಆಧಾರ್ ನೋಂದಣಿಯಾಗದಿರುವ ಸಮಸ್ಯೆ ನಿವೇದಿಸಿಕೊಂಡಿದ್ದರು. ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಭಾಗ್ಯ ಅವರಿಗೆ ಆಧಾರ್ ನೋಂದಣಿಗೆ ವಿಶೇಷ ಕ್ರಮ ವಹಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇವರ ಆಧಾರ್ ನೋಂದಣಿಗೆ ಇದ್ದ ತೊಂದರೆಗಳನ್ನು ವಿವರವಾಗಿ ಪಟ್ಟಿ ಮಾಡಿ ಇ-ಆಡಳಿತ ಕೇಂದ್ರಕ್ಕೆ ಕಳುಹಿಸಿ ಆಧಾರ್ ಕಾರ್ಡ್ ಪಡೆಯಲು ಪತ್ರ ಕಳುಹಿಸಲಾಗಿತ್ತು. ತೀವ್ರತರವಾದ ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ಮಾಡಿಸುವಂತೆಯೂ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾಮಟ್ಟದ ಆಧಾರ್ ಕೇಂದ್ರ ಅಧಿಕಾರಿಗಳು ಸತತವಾಗಿ ಪ್ರಯತ್ನಿಸಿ ಭಾಗ್ಯ ಅವರಿಗೆ ಆಧಾರ್ ನೋಂದಣಿಗೆ ಇದ್ದ ತೊಡಕುಗಳನ್ನು ಪರಿಹರಿಸಿದ್ದಾರೆ. ಕೊನೆಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ವಿಶೇಷ ಕಾಳಜಿಯಿಂದ ಭಾಗ್ಯ ಅವರಿಗೆ ಆಧಾರ್ ನೋಂದಣಿಯಾಗಿ ಕಾರ್ಡು ದೊರೆತಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಂದಲೇ ಭಾಗ್ಯ ಇಂದು ಆಧಾರ್ ಕಾರ್ಡ್ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ.ಪದವಿ ಪೂರ್ಣಗೊಳಿಸಿರುವ ನನಗೆ ಆಧಾರ್ ಇಲ್ಲದೆ ಇದ್ದುದ್ದರಿಂದ ಮುಂದಿನ ಭವಿಷ್ಯಕ್ಕೆ ತೊಂದರೆಯಾಗುತ್ತಿತ್ತು. ಜಿಲ್ಲಾಧಿಕಾರಿಗಳ ವಿಶೇಷ ಆಸಕ್ತಿಯಿಂದ ನನಗೆ ಆಧಾರ್ ಕಾರ್ಡ್ ಬಂದಿದೆ. ಇದಕ್ಕಾಗಿ ಜಿಲ್ಲಾಧಿಕಾರಿಯವರಿಗೆ ತುಂಬು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಬಹು ವರ್ಷಗಳ ಸಮಸ್ಯೆ ಪರಿಹಾರವಾಗಿದ್ದು ಮುಂದಿನ ಬದುಕಿಗೆ ಉತ್ಸಾಹ ದೊರೆತಿದೆ ಎಂದು ಭಾಗ್ಯ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.