ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಕೋಟೆಕಲ್ ಅಂಗನವಾಡಿ ಕೇಂದ್ರಕ್ಕೆ ಬುಧವಾರ ಡಿಸಿ ಜಾನಕಿ.ಕೆ.ಎಂ ಭೇಟಿ ನೀಡಿ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದುಕೊಂಡು ಮಕ್ಕಳ ಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಬುಧವಾರ ಗುಳೇದಗುಡ್ಡದ ನೂತನ ಕೈಮಗ್ಗ ನೇಕಾರಿಕೆ ಉತ್ಪನ್ನಗಳ ಉತ್ಪಾದನಾ ಕೇಂದ್ರದ ಪ್ರಾರಂಭೋತ್ಸವ ಹಾಗೂ ಕೇಂದ್ರದ ರಾಷ್ಟ್ರೀಯ ಜವಳಿ ಮಂತ್ರಾಲಯದ ಬೆಂಗಳೂರಿನ ನೇಕಾರರ ಸೇವಾ ಕೇಂದ್ರದ ಅಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಕೋಟೆಕಲ್ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಕ್ಕಳು ಚುರುಕಾಗಿ ಹರಳು ಹುರಿದಂತೆ ಉತ್ತರ ನೀಡಿದ್ದಾರೆ. ಮಕ್ಕಳಿಗೆ ದೇಶದ ಹೆಸರು, ರಾಜ್ಯದ ಹೆಸರು, ಜಿಲ್ಲೆಯ, ತಾಲೂಕಿನ ಹೆಸರು ಕೇಳಿದಾಗ ಮಕ್ಕಳು ಹೇಳಿದ್ದನ್ನು ಕಂಡು ತುಂಬಾನೇ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಗನವಾಡಿಗೆ ಭೇಟಿ ನೀಡಿ, ಮಕ್ಕಳಿಗೆ ಕೊಡುವ ಆಹಾರವನ್ನು ಪರಿಶೀಲನೆ ಮಾಡಿದರು. ಮಕ್ಕಳು ಟ್ವಿಂಕಲ್ ಟ್ವಿಂಕಲ್ ಹಾಡು ಹಾಡಿದ್ದಕ್ಕಾಗಿ ಖುಷಿ ಪಟ್ಟು ಅಂಗನವಾಡಿ ಕಾರ್ಯಕರ್ತೆಯ ಕಾರ್ಯವನ್ನು ಮೆಚ್ಚಿದರು. ಶಿಶುಪಾಲನ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ಮಾಡಿದ್ದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಂಗನವಾಡಿ ಮಕ್ಕಳಿಗೆ ಗಾರ್ಡನ್ ನಿರ್ಮಿಸಿ ಕೊಡಲು ಪಿಡಿಒ ಅವರಿಗೆ ಸೂಚಿಸಿದರು.ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೂ ಭೇಟಿ ನೀಡಿದರು. ನಂತರ ಗ್ರಾಪಂ ಗ್ರಂಥಾಲಯಕ್ಕೆ ಭೇಟಿ ನೀಡಿ ತಮ್ಮ ಪ್ರಶಂಸೆ ವ್ಯಕ್ತಪಡಿಸಿದರು. ನಂತರ ಗ್ರಾಪಂ ಅಡಿಯಲ್ಲಿ ನಡೆದಿರುವ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಿರುವ ವಿವಿಧ ಗ್ರಂಥಗಳನ್ನು ನೋಡಿದರು. ಅಧ್ಯಯನಕ್ಕೆ ಬಂದಿದ್ದ ವಿದ್ಯಾರ್ಥಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳಿದರು. ನಾವು ಕೇಳಿದ ಅಧ್ಯಯನಕ್ಕೆ ಪೂರಕವಾದ ಬುಕ್ಸ್ ಗಳನ್ನು ಪಿಡಿಓ ಅವರು ತರಿಸಿ ಕೊಟ್ಟಿದ್ದಾರೆ, ನಮಗೆ ವೈಫೈ ಕನೆಕ್ಷನ್ ಹಾಗೂ ಗ್ರಂಥಾಲಯದಲ್ಲಿ ನಮಗೆ ಕಂಪ್ಯೂಟರ್ ಬಳಸಲು ಅವಕಾಶ ಸಹ ಮಾಡಿಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ಮಂಗಳಾ ಎಂ, ಗುಳೇದಗುಡ್ಡ ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ್, ಕಂದಾಯ ನಿರೀಕ್ಷಕ ಎಸ್.ಡಿ.ಜೋಗಿನ್, ಪಿಡಿಓ ಆರತಿ ಕ್ಷತ್ರಿ, ಅಂಗನವಾಡಿ ಕಾರ್ಯಕರ್ತೆ ಹಾಜರಿದ್ದರು.