ಕನ್ನಡಪ್ರಭ ವಾರ್ತೆ ಹೊಸಪೇಟೆನ್ಯಾನೋ ರಸಗೊಬ್ಬರ ಬಳಕೆಯಿಂದ ಪೋಷಕಾಂಶದ ಸದ್ಬಳಕೆಯಾಗುತ್ತದೆ ಹಾಗೂ ಬೆಳೆಗಳ ಸಾರಜನಕದ ಅಗತ್ಯ ಪೂರೈಸುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು. ತಾಲೂಕಿನ ಹೊಸೂರು ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಇಫ್ಕೊ ಸಂಸ್ಥೆಯ ಸಹಭಾಗಿತ್ವದಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು. ನ್ಯಾನೋ ಗೊಬ್ಬರಗಳ ನಿಖರ ಮತ್ತು ಉದ್ದೇಶಿತ ಬಳಕೆ ಪರಿಸರಕ್ಕೆ ಹಾನಿಯಾಗದಂತೆ ಬೆಳೆಗಳ ಸಾರಜನಕದ ಅಗತ್ಯವನ್ನು ಪೂರೈಸುತ್ತದೆ. ಪೋಷಕಾಂಶಗಳ ಪೋಲಾಗುವಿಕೆ ಕಡಿಮೆಯಾಗುತ್ತದೆ ಹಾಗೂ ಸಾಮಾನ್ಯ ರಸಗೊಬ್ಬರ ಬಳಕೆಯಿಂದಾಗುವ ಮಣ್ಣು ಮತ್ತು ನೀರಿನ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು. ಇದನ್ನು ಸುಲಭವಾಗಿ ಶೇಖರಣೆ ಮತ್ತು ಸಾಗಾಣಿಕೆ ಮಾಡಬಹುದಾಗಿದೆ. ನ್ಯಾನೋ ರಸಗೊಬ್ಬರದಿಂದ ಪರಿಸರ ಮಾಲಿನ್ಯವನ್ನು ತಪ್ಪಿಸಬಹುದಾಗಿದೆ. ರಸಗೊಬ್ಬರಗಳು ಚಿಕ್ಕಗಾತ್ರದ ಕಣಗಳನ್ನು ಹೊಂದಿರುವುದರಿಂದ ಬೆಳೆಗೆ ಶೇ.೮೦ರಷ್ಟು ಪರಿಣಾಮ ಬೀರುತ್ತದೆ. ಗಿಡಕ್ಕೆ ಬೇಕಾಗಿರುವ ಸಾರಜನಕ ಮತ್ತು ರಂಜಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಿ ಬೆಳೆ ಹಾಗೂ ಬೇರಿನ ಬೆಳೆವಣಿಗೆ ಸಹಯವಾಗಿದೆ. ಇದನ್ನು ಬಳಕೆ ಮಾಡುವುದರಿಂದ ಬೆಳೆಗಳ ಉತ್ಪಾದಕೆತೆ ಹೆಚ್ಚಾಗಿ ಬೆಳೆಗೆ ತಗಲುವ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ರೈತರಿಗೆ ಉತ್ತಮ ಆದಾಯಕ್ಕೆ ಸಹಕಾರಿಯಾಗಿದೆ ಎಂದರು.ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಿ.ಟಿ. ಮಂಜುನಾಥ ಮಾತನಾಡಿ, ಜಿಲ್ಲೆಯ ಬಹುತೇಕ ಮಣ್ಣುಗಳಲ್ಲಿ ಸಾರಜನಕ ಕೊರತೆ ಹೆಚ್ಚಾಗಿದೆ. ರೈತರು ಕಡ್ಡಾಯವಾಗಿ ಪ್ರತಿ ೩ ವರ್ಷಗಳಿಗೊಮ್ಮೆ ಮಣ್ಣಿನ ಪರೀಕ್ಷೆಯನ್ನು ಮಾಡಿಸಬೇಕು. ಡ್ರೋನ್‌ಗಳ ಮೂಲಕ ನ್ಯಾನೋ ರಸಗೊಬ್ಬರ ಸಿಂಪಡಿಸುವುದು ಕೃಷಿ ಕ್ಷೇತ್ರದಲ್ಲಿ ಒಂದು ಹೊಸ ತಂತ್ರಜ್ಞಾನವಾಗಿದೆ. ರೈತರಿಗೆ ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ನ್ಯಾನೋ ಯೂರಿಯಾ ಶೇ.೨೦ ಸಾರಜನಕ ಹೊಂದಿದೆ. ನ್ಯಾನೋ ಡಿಎಪಿ ಶೇ.೮ ಸಾರಜನಕ ಮತ್ತು ಶೇ.೧೬ ರಂಜಕ ಹೊಂದಿದ್ದು, ಬೆಳೆಗೆ ಪೋಷಕಾಂಶ ಒದಗಿಸಿ ಇಳುವರಿ ಹೆಚ್ಚಿಸುತ್ತದೆ. ರೈತರು ರೂಢಿಗತವಾಗಿ ಬಿತ್ತನೆ ಮಾಡುವಾಗ ಡಿಎಪಿ, ಮಳೆ ಬಂದಾಗ ಯೂರಿಯಾ ಬಳಸುತ್ತಿದ್ದು, ನ್ಯಾನೋ ಯೂರಿಯಾ ಬಳಕೆ ಬಗ್ಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ. ಒಂದು ಎಕರೆ ವ್ಯಾಪ್ತಿಯನ್ನು ಡ್ರೋನ್ ಮೂಲಕ ೬ ರಿಂದ ೮ ನಿಮಿಷದಲ್ಲಿ ಸಿಂಪಡಣೆ ಮಾಡಬಹುದು. ಎಕರೆ ಸಿಂಪಡಣೆ ಮಾಡಲು ೩೦೦ ರೂ. ಶುಲ್ಕ ನಿಗದಿ ಮಾಡಲಾಗಿದೆ. ರಸಗೊಬ್ಬರವನ್ನು ಸಿಂಪರಣೆಗೂ ಮುನ್ನ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದರು.ಈ ವೇಳೆ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಕೃಷಿ ಇಲಾಖೆ ಉಪನಿರ್ದೇಶಕ ಕೆ.ನಯೀಮ್ ಪಾಷಾ, ಸಹಾಯಕ ಕೃಷಿ ನಿರ್ದೇಶಕ ಎಸ್.ಮನೋಹರ ಗೌಡ, ಇಫ್ಕೊ ಸಂಸ್ಥೆಯ ಕ್ಷೇತ್ರ ವ್ಯವಸ್ಥಾಪಕ ಜಿ.ಗೋವಿಂದರಾಜು ಸೇರಿದಂತೆ ಸ್ಥಳೀಯ ರೈತರು ಹಾಗೂ ರೈತ ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು.