ಹುಬ್ಬಳ್ಳಿ:
ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೀಡಾಗಿರುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ ನೀಡಿ ಪರಿಶೀಲಿಸಿದರು. ತಕ್ಷಣವೇ ಹಾನಿಗೀಡಾದ ಅಂದಾಜಿನ ಬಗ್ಗೆ ಸಮೀಕ್ಷೆ ನಡೆಸಿ ವರದಿ ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಪ್ರವಾಹ ಪೀಡಿತ ಪ್ರದೇಶಗಳ ಜನರ ಸಮಸ್ಯೆಗಳಿಗೆ ಕಿವಿಯಾದರು.ಶುಕ್ರವಾರ ಮಧ್ಯಾಹ್ನದಿಂದಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡಲು ಪ್ರಾರಂಭಿಸಿದ ಜಿಲ್ಲಾಧಿಕಾರಿ, ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು. ಮನೆ ಹಾಗೂ ಬೆಳೆಹಾನಿ ವೀಕ್ಷಿಸಿದರು.ಜಂಟಿ ಸಮೀಕ್ಷೆ ನಡೆಸಿ:
ಬೆಳೆಹಾನಿ ಬಗ್ಗೆ ತುರ್ತಾಗಿ ಜಂಟಿ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಮನೆ ಹಾನಿ ಮತ್ತು ಮನೆಗೆ ನೀರು ನುಗ್ಗಿ ಹಾನಿ ಆಗಿರುವ ಬಗ್ಗೆ ವರದಿ ಸಲ್ಲಿಸುವಂತೆ ಗ್ರಾಪಂ ಮತ್ತು ತಹಸೀಲ್ದಾರ್‌ಗೆ ಸೂಚಿಸಲಾಗಿದೆ. ವರದಿ ನೀಡಿದ ತಕ್ಷಣ ಪರಿಹಾರ ನೀಡಲಾಗುವುದು ಎಂದು ಜನರಿಗೆ ಜಿಲ್ಲಾಧಿಕಾರಿ ಭರವಸೆ ನೀಡಿದರು.ಸೇತುವೆ ಎತ್ತರಗೊಳಿಸಿ:
ತುಪ್ಪರಿಹಳ್ಳಕ್ಕೆ ಅಯಟ್ಟಿ ಮತ್ತು ಶಿರೂರ ಮಧ್ಯೆ ನಿರ್ಮಿಸಿರುವ ಸೇತುವೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಎರಡು ಗ್ರಾಮಗಳ ನಿವಾಸಿಗಳಿಂದ ಮನವಿ ಸ್ವೀಕರಿಸಿದರು. ಸೇತುವೆ ಎತ್ತರಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದ ಅವರು, ಹಾರೋಬೆಳವಡಿ-ಆಯಟ್ಟಿ ರಸ್ತೆ ಅಭಿವೃದ್ಧಿ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. ಆಯಟ್ಟಿ ಗ್ರಾಮದ ಫಕ್ಕೀರಪ್ಪ ಜೋಗನ್ನವರ ತೋಟದಲ್ಲಿ ಹಳ್ಳದ ನೆರೆ ಹಾಗೂ ಅತಿ ಮಳೆಯಿಂದಾಗಿ ಹಾಳಾಗಿರುವ ಹತ್ತಿ ಮತ್ತು ಕಡ್ಲಿ ಬೆಳೆ ಪರಿಶೀಲಿಸಿದರು.ತುಪ್ಪರಿಹಳ್ಳದ ನೆರೆಯಿಂದ ಶಿರೂರ ಗ್ರಾಮದ ಶಾಲೆ ಆವರಣ ಹಾಗೂ 100ಕ್ಕೂ ಹೆಚ್ಚು ಮನೆಗಳಿಗೆ ನೀರು ಬಂದಿದೆ. ಇದನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಬೇಕು. ಹಾಳಾಗಿರುವ ರಸ್ತೆ ದುರಸ್ತಿಗೊಳಿಸಬೇಕು. ಹೆಚ್ಚುವರಿ ಹೆಸರು ಕಾಳು ಖರೀದಿಸಬೇಕು. ಬೆಳೆಹಾನಿ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಶಾಲಾ ಆವರಣ, ಮನೆಗಳಿಗೆ ನೀರು ಬಂದಿರುವುದನ್ನು ತೆರವುಗೊಳಿಸಲು ಪಿಆರ್‌ಇಡಿ ವಿಭಾಗಗಳಿಗೆ ತಿಳಿಸಲಾಗಿದೆ ಎಂದರು.
ಆಕ್ಷೇಪಣೆ ಸಲ್ಲಿಸಿ:ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ಮಾಡಿ ಅದರ ವರದಿಯನ್ನು ಗ್ರಾಪಂ, ತಹಸೀಲ್ದಾರ್ ಕಚೇರಿ, ರೈತ ಸಂಪರ್ಕ ಕೇಂದ್ರ, ಜಿಲ್ಲಾಧಿಕಾರಿ ಕಚೇರಿ ವೆಬ್‍ಸೈಟ್‌ದಲ್ಲಿ ಪ್ರಕಟಿಸಲಾಗುತ್ತದೆ. ಹೆಸರು ಬಿಟ್ಟು ಹೋಗಿದ್ದರೆ ರೈತರಿಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಅವಕಾಶ ನೀಡಲಾಗುವುದು. ರೈತರು ಪರಿಶೀಲಿಸಿ, ತಮ್ಮ ಹೆಸರು, ಜಮೀನು ಬೆಳೆಹಾನಿ ವಿವರ ಪ್ರಕಟವಾಗಿರದಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಮರುಸಮೀಕ್ಷೆ ಮಾಡಿ ಅರ್ಹವಿದ್ದಲ್ಲಿ ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ತಿಳಿಸಿದರು.
ತೀರ್ಲಾಪುರ-ಮೊರಬ ರಸ್ತೆ ಹಾನಿ:ಮಳೆಯಿಂದಾಗಿ ತೀರ್ಲಾಪುರ-ಮೊರಬ ರಸ್ತೆ ಹಾನಿಗೀಡಾಗಿದೆ. ಅದನ್ನು ದುರಸ್ತಿಗೊಳಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಮಳೆಯಿಂದಾಗಿ ಹಾನಿಗೀಡಾಗಿರುವ ಮೊರಬ ಗ್ರಾಮದ ರೈತ ಮಹಾದೇವಪ್ಪ ಗೊಡಿಕಟ್ಟಿ ಅವರ ಹತ್ತಿ ಬೆಳೆ ವೀಕ್ಷಿಸಿದರು. ತೀರ್ಲಾಪುರ ಗ್ರಾಮದ ಎಸ್‌ಸಿ ಕಾಲನಿಯ ವಡ್ಡರ ಓಣಿಯ ಮನೆಗಳಿಗೆ ಭೇಟಿ ನೀಡಿ, ಹಾನಿ ಪರಿಶೀಲಿಸಿದರು. ಕಾಲನಿಯ 150ಕ್ಕೂ ಹೆಚ್ಚು ಮನೆಗಳಲ್ಲಿ ನೀರಿನ ಜವುಳು ಎದ್ದು ನೀರಾಡುತ್ತದೆ. ಇದಕ್ಕೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳಗಳಿಂದ ಬರುವ ಭಾರೀ ಪ್ರಮಾಣದ ನೀರಿನಿಂದ ಮುಳುಗಡೆ ಆಗಿರುವ ಬ್ರಿಡ್ಜ್ ಪಕ್ಕದ ಜಮೀನುಗಳನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು.ಕಿರೇಸೂರ ಗ್ರಾಮದ ಶೇಂಗಾ (ನೆಲಗಡಲೆ), ಈರುಳ್ಳಿ ಮತ್ತು ಹತ್ತಿ ಹೊಲಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರ್ ಸುಧೀರ ಸಾಹುಕಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಪ್ರಕಾಶ ನಾಶಿ, ರಾಜು ಮಾವರಕರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಜಿತಕುಮಾರ ಮಶಾಲ್ದಿ, ತಾಪಂ ಇಒ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.