ಹಾಸನ: ಶಿವಯೋಗಿ ಸಿದ್ದರಾಮ ಜಯಂತಿಯ ಅಂಗವಾಗಿ ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಆಕರ್ಷಕ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಮೆರವಣಿಗೆಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ವಯೋಗಿ ಸಿದ್ದರಾಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಲಿಂಗಭೇದ ಮೀರಿದ ಚಿಂತನೆ, ಸಮಾಜ ಸುಧಾರಣೆ, ಭಾಷೆ, ಸಂಸ್ಕೃತಿಯ ಶುದ್ಧೀಕರಣದಲ್ಲಿ ಶರಣರ ಕೊಡುಗೆ ಅಪಾರವಾಗಿದೆ. ಇಂತಹ ಮಹಾನ್ ಶರಣರ ಜಯಂತಿಯನ್ನು ಹೆಮ್ಮೆಯಿಂದ ಆಚರಿಸುತ್ತಿರುವುದು ನಮಗೆಲ್ಲ ಧನ್ಯತೆಯ ವಿಷಯ. ನವ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ, ನೂತನ ಚಿಂತನೆಗಳನ್ನು ಇಡೀ ವಿಶ್ವಕ್ಕೆ ನೀಡಿದ ಶರಣ ಪರಂಪರೆ ನಮಗೆ ಹೆಮ್ಮೆಯಾಗಿದೆ ಎಂದರು. ಒಳ್ಳೆಯ ಸಮಾಜಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟವರು ಶರಣರು. ಶಿವಯೋಗಿ ಹಾಗೂ ಕರ್ಮಯೋಗಿ ಸಿದ್ದರಾಮರು ಅಂತಹ ಶರಣರಲ್ಲಿ ಪ್ರಮುಖರು ಎಂದು ಬಣ್ಣಿಸಿದರು.ನಂತರ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಭಾ ಕಾರ್ಯಕಮ ಜರುಗಿತು. ಮೆರವಣಿಗೆ ಕಾರ್ಯಕ್ರಮದಲ್ಲಿ ಅರಕಲಗೂಡು ದೊಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಜವೆನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಸೀಗೆಗುಡ್ಡದ ನಂಧೀಶ್ವರ ಶಿವಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿದ್ದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ, ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಬಿ.ಪಿ. ಐಸಾಮೇಗೌಡ, ಅಖಿಲ ಭಾರತ ಲಿಂಗಾಯತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಗ್ರಾನೈಟ್ ರಾಜಶೇಖರ್, ಹೆಚ್.ವಿ. ಹೇಮಂತ್ ಕುಮಾರ್, ಬೋವಿ ಜನಾಂಗದ ಅಧ್ಯಕ್ಷ ಮಂಜಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ತಾರನಾಥ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.