ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ಹಿನ್ನೆಲೆ ಜಿಲ್ಲಾಧಿಕಾರಿ ಭೇಟಿ
ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಾದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಗ್ರಾಮಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಭೇಟಿ ನೀಡಿದ್ದರು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್ ಇಂಡಿಗನತ್ತ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತನಾಡಿದರು. ಇದೆ ವೇಳೆ ಹಿರಿಯ ಮುಖಂಡ ಮಾದತಂಬಡಿ ಮಾತನಾಡಿ, ಭಾರತ ದೇಶದ ಪ್ರಜೆಗಳಾಗಿ ನಾವು ನಮ್ಮ ಗ್ರಾಮಗಳಿಗೆ ಸುಸಜ್ಜಿತವಾದ ರಸ್ತೆ ಹಾಗೂ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಹಲವಾರು ವರ್ಷಗಳಿಂದ ಈ ಹಿಂದೆ ಇದ್ದಂತ ಜನಪ್ರತಿನಿಧಿ ಹಿರಿಯ ಅಧಿಕಾರಿಗಳಿಗೂ ಮನವಿ ಸಲ್ಲಿಸಿ ನಮಗೆ ಸಾಕಾಗಿದೆ ಇಲ್ಲಿನ ಜನರು ಕಾಡು ಪ್ರಾಣಿಗಳಿಗಿಂತ ಕೀಳಾಗಿ ನಮ್ಮ ಬದುಕು ಸವೆಸುವಂತಾಗಿದೆ ಇನ್ನು ಮುಂದಾದರು ಇಲ್ಲಿನ ಬುಡಕಟ್ಟು ಸಮುದಾಯ ಬೇಡಗಂಪಣ ಜನಾಂಗದವರೆ ಹೆಚ್ಚಾಗಿ ವಾಸಿಸುವ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಶಿಲ್ಪನಾಗ್ ಮಾತನಾಡಿ, ಹಲವಾರು ಗ್ರಾಮಗಳು ಅರಣ್ಯ ಪ್ರದೇಶದ ಮಧ್ಯದಲ್ಲಿರುವುದರಿಂದ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಕಾನೂನಿನಲ್ಲಿ ತೊಡಗಿದೆ ಹೀಗಾಗಿ ಸರ್ಕಾರದ ಮಟ್ಟದಲ್ಲಿ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅನುಮೋದನೆಗಾಗಿ ಮನವಿ ಸಲ್ಲಿಸಲಾಗಿದೆ ಜೊತೆಗೆ ಕಾನೂನಿನಲ್ಲಿ ತೊಡಕಿರುವುದರಿಂದ ಅರಣ್ಯ ಇಲಾಖೆಗೂ ಸಹ ವಿವಿಧ ಇಲಾಖೆಯ ವತಿಯಿಂದ ಸೌಲಭ್ಯ ಕಲ್ಪಿಸಲು ಅನುಮೋದನೆಗಾಗಿ ಅರ್ಜಿ ಸಲ್ಲಿಸಲಾಗಿದೆ. ಡಿಸಿಎಫ್ ಸಂತೋಷ್ ಕುಮಾರ್ ಅವರಿಗೂ ತುರ್ತಾಗಿ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಕಳೆದ ಎಂಟು ತಿಂಗಳ ಹಿಂದೆ ಜಿಲ್ಲಾಧಿಕಾರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ ಈಗಾಗಲೇ ಕೆಲವು ಹಾಡಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಪಟ್ಟಿಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೂ ಸಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಡಿಸಿಎಫ್ ಸಂತೋಷ್ ಕುಮಾರ್ ಮಾತನಾಡಿ ,ಅರಣ್ಯ ಇಲಾಖೆ ವತಿಯಿಂದ ಸರ್ಕಾರ ಚಾರಣಕ್ಕೆ ಬರುವವರಿಗೆ ನಿಷೇಧಗೊಳಿಸಿರುವುದರಿಂದ ಗ್ರಾಮಗಳಿಗೆ ಬರುವ ಜನರಿಗೆ ಯಾವುದೇ ತೊಂದರೆ ನೀಡದಂತೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದ. ಜೊತೆಗೆ ಬೇರೆ ಗ್ರಾಮಗಳಿಂದಲೂ ಸಹ ಹೆಚ್ಚಾಗಿ ಬರುತ್ತಿರುವುದರಿಂದ ತೊಂದರೆ ಆಗುತ್ತದೆ. ಹೀಗಾಗಿ ನಿಮ್ಮ ಗ್ರಾಮದಲ್ಲಿ ಹಿರಿಯ ಮುಖಂಡರಾದ 5 ಜನರ ಹೆಸರನ್ನು ತಿಳಿಸಿ ನಿಮ್ಮ ಗ್ರಾಮಕ್ಕೆ ಬರುವವರನ್ನು ಗುರುತಿಸಿ ಗ್ರಾಮದವರೆಂದು ಹೇಳಿದರೆ ಬಿಡಲು ನಮ್ಮದೇನು ಅಭ್ಯಂತರವಿಲ್ಲ. ಆದುದರಿಂದ ಗ್ರಾಮದವರು ಓಡಾಡಲು ಇಲಾಖೆ ಯಾವುದೇ ನಿರ್ಬಂಧ ವಿಧಿಸಿಲ್ಲ ತೊಂದರೆಯೂ ಸಹ ನೀಡುವುದಿಲ್ಲ ಎಂದು ಇದೇ ವೇಳೆಯಲ್ಲಿ ಗ್ರಾಮಸ್ಥರಿಗೆ ಭರವಸೆ ನೀಡಿದರು.ಈ ವೇಳೆ ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹೋ, ತಹಸೀಲ್ದಾರ್ ಗುರುಪ್ರಸಾದ್, ಎಸಿಎಫ್ ಚಂದ್ರಶೇಖರ್ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಇನ್ಸ್‌ಪೆಕ್ಟರ್ ಜಗದೀಶ್, ಗ್ರಾಮಲೆಕ್ಕಿಗ ವಿನೋದ್, ಪಿಡಿಒ ಕಿರಣ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.