ರಾಣಿಬೆನ್ನೂರು: ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಬುಧವಾರ ನಗರದ ಮಿನಿ ವಿಧಾನಸೌಧ ಹಾಗೂ ನಗರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಿನಿ ವಿಧಾನಸೌಧ ಪ್ರವೇಶ ದ್ವಾರದಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿದ್ದನ್ನು ಕಂಡ ಜಿಲ್ಲಾಧಿಕಾರಿ ವ್ಯವಸ್ಥಿತ ರೀತಿಯಲ್ಲಿ ಪಾರ್ಕಿಂಗ್ ಮಾಡಿಸಲು ತಹಸೀಲ್ದಾರ್ ಆರ್.ಎಚ್. ಭಾಗವಾನ್ ಅವರಿಗೆ ಸೂಚಿಸಿದರು.
ಆಹಾರ ಇಲಾಖೆ ಸಿಬ್ಬಂದಿ ಮೇಲೆ ಹರಿಹಾಯ್ದ ಡಿಸಿ: ಪಡಿತರ ಚೀಟಿ ವಿತರಣೆ ಕುರಿತು ಆಹಾರ ಇಲಾಖೆ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ವಿಚಾರಿಸಿದರು. ಆದರೆ ಸಿಬ್ಬಂದಿ ಬಳಿ ಸರಿಯಾದ ಮಾಹಿತಿ ಇರಲಿಲ್ಲ. ಪಡಿತರ ಚೀಟಿ ವಿತರಣೆ ಮಾಡುವಂತೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಈ ವರೆಗೆ ಎಷ್ಟು ಜನರಿಗೆ ನೀಡಿದ್ದೀರಾ ಎಂದು ಪ್ರಶ್ನಿಸಿದರು. 650 ಜನರಿಗೆ ವಿತರಿಸಿದ್ದಾಗಿ ಸಿಬ್ಬಂದಿ ತಿಳಿಸಿದರು. ಇದರಿಂದ ಕೆಂಡಾಮಂಡಲವಾದ ಡಿಸಿ, ಇವರು ಮಾಡುವ ಕೆಲಸದಲ್ಲಿ ಕರ್ತವ್ಯಲೋಪ ಕಂಡ ಬಂದ ಕಾರಣ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ ಪಾಟೀಲ ಅವರಿಗೆ ನೋಟಿಸ್ ನೀಡುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ ಆರ್.ಎಚ್. ಭಾಗವಾನ ಅವರಿಗೆ ಸೂಚಿಸಿದರು.ಹೊಸ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ: ಜಿಲ್ಲಾಧಿಕಾರಿ ಸಬ್ ರಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿ ಅಪಾರ ಜನಸಂದಣಿ ಕಂಡು ಬಂದಿತು. ನಮ್ಮ ಕಚೇರಿ ಜಾಗ ಸಣ್ಣದಿದ್ದು ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ. ತಹಸೀಲ್ದಾರ್ ಕಚೇರಿ ಹಿಂಭಾಗದಲ್ಲಿ ಜಾಗವಿದ್ದು, ನೀವು ಮಂಜೂರಾತಿ ನೀಡಿದಲ್ಲಿ ಕಟ್ಟಡ ನಿರ್ಮಿಸಬಹುದು ಹಾಗೂ ಇದರಿಂದ ಜನರಿಗೂ ಅನುಕೂಲವಾಗುತ್ತದೆ ಎಂದು ಸಬ್ ರಜಿಸ್ಟ್ರಾರ್ ವಿಶ್ವನಾಥ ಸುಬೇದಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಪ್ರಸ್ತಾವನೆ ಕಳುಹಿಸಿ ಕೊಡಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಬ್ ರಜಿಸ್ಟ್ರಾರ್ ಅವರಿಗೆ ಸೂಚಿಸಿದರು.
ಸದಸ್ಯರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ: ನಗರಸಭೆಯ ಸದಸ್ಯರ ಜತೆ ಜಿಲ್ಲಾಧಿಕಾರಿ ಚರ್ಚೆ ನಡೆಸಿದರು. ನಗರದಲ್ಲಿ ಸಂಚಾರ ದಟ್ಟಣೆ, ಸ್ವಚ್ಛತೆ ಹಾಗೂ ಪರಿಸರ ಕಾಳಜಿ ಬಗ್ಗೆ ಅಧಿಕಾರಿಗಳ ಗಮನ ವಹಿಸಬೇಕು ಎಂದು ಸದಸ್ಯರು ಜಿಲ್ಲಾಧಿಕಾರಿಗೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ನಗರದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಸದಸ್ಯರಿಗೆ ಮನವಿ ಮಾಡಿದರು.