ಹಾವೇರಿ: ಪ್ರತಿಟನ್ ಕಬ್ಬಿಗೆ ₹3,300 ದರ ನೀಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ತಡರಾತ್ರಿ ಅಂತ್ಯಗೊಂಡಿದೆ.
ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆಸಿದ ಸಂಧಾನ ಸಭೆ ತಕ್ಕಮಟ್ಟಿಗೆ ಫಲಪ್ರದವಾಗಿದೆ.ರಾಜ್ಯ ಸರ್ಕಾರ ಘೋಷಣೆ ಮಾಡಿದ ಟನ್ ಕಬ್ಬಿಗೆ ₹3,300 ದರವನ್ನು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು ಹಾವೇರಿ ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ನಾಲ್ಕು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು. ಬುಧವಾರ ರಾತ್ರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಧ್ಯಸ್ಥಿಕೆ ವಹಿಸಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಜತೆಗೆ ಸುದೀರ್ಘ ಸಭೆ ನಡೆಸಿದರು. ಬೇಗನೆ ಇತ್ಯರ್ಥಕ್ಕೆ ಬಾರದ ಹಿನ್ನೆಲೆ ತಡರಾತ್ರಿ ವರೆಗೆ ಸಭೆ ನಡೆಯಿತು.
ಈ ವೇಳೆ ಸಕ್ಕರೆ ಕಾರ್ಖಾನೆಯವರು ರೈತರ ಬೇಡಿಕೆಯನ್ವಯ ದರ ಕೊಡಲಿಕ್ಕೆ ಆಗುವುದಿಲ್ಲ ಎಂದು ವಾದ ಮಂಡಿಸಿದರು. ಇತ್ತ ಕಬ್ಬು ಬೆಳೆಗಾರರು ಕೂಡ ತಾವು ಹಿಡಿದ ಪಟ್ಟು ಸಡಿಲಿಸಲಿಲ್ಲ. ಇದರಿಂದ ಸಭೆ ಬೇಗನೆ ಅಂತ್ಯ ಕಾಣಲಿಲ್ಲ. ತಡರಾತ್ರಿ 11.30ರ ವರೆಗೂ ಸಭೆ ನಡೆಸಿ, ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರರ ಮನವೊಲಿಸುವಲ್ಲಿ ಜಿಲ್ಲಾಧಿಕಾರಿಯವರು ಯಶಸ್ವಿಯಾದರು.ಶಿಗ್ಗಾಂವಿ ತಾಲೂಕು ಕೋಣನಕೇರಿ ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಭರಿಸುವುದರೊಂದಿಗೆ ಟನ್ ಕಬ್ಬಿಗೆ ₹2,850 ಕೊಡಲು ಒಪ್ಪಿಗೆ ಸೂಚಿಸಿದರು. ಅದೇ ರೀತಿ ಜಿ.ಎಂ. ಶುಗರ್ಸ್ ಮಾಲೀಕತ್ವದ ಸಂಗೂರು ಹಾಗೂ ಬೈರನಪಾದ ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಭರಿಸಿ ಟನ್ ಕಬ್ಬಿಗೆ ₹2,775 ಕೊಡುವುದಾಗಿ ಭರವಸೆ ನೀಡಿದರು. ಇದು ಕಳೆದ ಸಲಕ್ಕಿಂತ ಟನ್ ಕಬ್ಬಿಗೆ ಸುಮಾರು ₹300 ಹೆಚ್ಚಳವಾದ್ದರಿಂದ ಬೆಳೆಗಾರರು ಸಮ್ಮತಿ ಸೂಚಿಸಿದರು. ಅಲ್ಲದೇ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭವಾಗಬೇಕಿದ್ದರಿಂದ ಬೆಳೆಗಾರರು ಅನಿವಾರ್ಯವಾಗಿ ಒಪ್ಪಿಗೆ ಸೂಚಿಸಿದರು. ಬಳಿಕ ಹೋರಾಟ ವಾಪಸ್ ಪಡೆದಿರುವುದಾಗಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಘೋಷಿಸಿದರು.
ರಾಜ್ಯ ಸರ್ಕಾರ ಟನ್ ಕಬ್ಬಿಗೆ ₹3,300 ದರ ನಿಗದಿ ಮಾಡಿದ್ದನ್ನು ಜಿಲ್ಲೆಯ ರೈತರಿಗೂ ಅನ್ವಯವಾಗುವಂತೆ ಕೊಡಬೇಕೆಂದು ಒತ್ತಾಯಿಸಿ ಮೂರು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿತ್ತು. ಬುಧವಾರ ಹೆದ್ದಾರಿ ತಡೆಗೆ ಕರೆ ಕೊಟ್ಟಿದ್ದರೂ ಡಿಸಿ ಸಭೆ ನಡೆಸುವುದಾಗಿ ತಿಳಿಸಿದ್ದರಿಂದ ಹೆದ್ದಾರಿ ತಡೆ ಕೈಬಿಡಲಾಗಿತ್ತು. ಬೇಡಿಕೆ ಈಡೇರದಿದ್ದರೆ ಗುರುವಾರದಿಂದ ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡೆದು ಕಾರ್ಖಾನೆ ಬಳಿ ಧರಣಿ ಆರಂಭಿಸುವುದಾಗಿ ತಿಳಿಸಲಾಗಿತ್ತು. ಆದರೆ ಬುಧವಾರ ರಾತ್ರಿ 11.30ರ ತನಕ ಸಭೆ ನಡೆಸಿ, ಕಬ್ಬು ಬೆಳೆಗಾರರ ಬೇಡಿಕೆ ಈಡೇರಿದ್ದರಿಂದ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ ಜತೆಗೆ ಸಭೆ ನಡೆಸಿದ್ದಾರೆ. ಕಟಾವು, ಸಾಗಾಣಿಕೆ ವೆಚ್ಚದ ಜತೆಗೆ ₹2,850 ಹಾಗೂ ₹2,775 ನಂತೆ ದರ ನೀಡುವುದಾಗಿ ತಿಳಿಸಿದ್ದಾರೆ. ತಾತ್ಕಾಲಿಕವಾಗಿ ಸತ್ಯಾಗ್ರಹ ಅಂತ್ಯಗೊಳಿಸುತ್ತಿದ್ದು, ಆದಷ್ಟು ಶೀಘ್ರದಲ್ಲಿ ಕಾರ್ಖಾನೆಯಲ್ಲಿ ರಿಕವರಿ ಲ್ಯಾಬ್ ಹಾಗೂ ಸರ್ಕಾರಿ ತೂಕದ ಯಂತ್ರ ಅಳವಡಿಸಬೇಕು ಎಂದು ಹಾವೇರಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಹೇಳಿದರು.