ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹೩ ಸಾವಿರ ಬೆಂಬಲ ಬೆಲೆ ನೀಡಲು ಮನವಿ

KannadaprabhaNewsNetwork |  
Published : Nov 14, 2025, 03:15 AM IST
ಪೋಟೊ-೧೩ ಎಸ್.ಎಚ್.ಟಿ. ೧ಕೆ- ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ ತುರ್ತು ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮುಖಂಡ ಸಂತೋಷ ಕುರಿ ಮಾತನಾಡಿ, ಮೆಕ್ಕೆಜೋಳ ಬೆಳೆಯುವ ರೈತರಿಗೆ ಪ್ರತಿವರ್ಷ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ಪ್ರತಿವರ್ಷ ಸಂಕಷ್ಟದಲ್ಲಿಯೇ ಸಿಲುಕಿ ಸಾಲಬಾಧೆಯಿಂದ ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹೩ ಸಾವಿರ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.

ಶಿರಹಟ್ಟಿ: ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹೩ ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು. ತಾಲೂಕು ಕೇಂದ್ರದಲ್ಲಿ ಗೋವಿನಜೋಳ ಖರೀದಿ ಕೇಂದ್ರವನ್ನು ಸರ್ಕಾರ ಕೂಡಲೇ ತೆರೆದು ತಾಲೂಕಿನ ರೈತರ ನೆರವಿಗೆ ಧಾವಿಸುವಂತೆ ಒತ್ತಾಯಿಸಿ ಶಿರಹಟ್ಟಿ ತಾಲೂಕು ಸಮಗ್ರ ರೈತ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಗುರುವಾರ ಶಿರಹಟ್ಟಿ ತಾಲೂಕು ಸಮಗ್ರ ರೈತ ಹೋರಾಟ ಸಮಿತಿ ವತಿಯಿಂದ ಪಟ್ಟಣದಲ್ಲಿ ರೈತರೆಲ್ಲರೂ ಸೇರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮುಖಂಡ ಸಂತೋಷ ಕುರಿ ಮಾತನಾಡಿ, ಮೆಕ್ಕೆಜೋಳ ಬೆಳೆಯುವ ರೈತರಿಗೆ ಪ್ರತಿವರ್ಷ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ಪ್ರತಿವರ್ಷ ಸಂಕಷ್ಟದಲ್ಲಿಯೇ ಸಿಲುಕಿ ಸಾಲಬಾಧೆಯಿಂದ ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹೩ ಸಾವಿರ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.ಗೋವಿನಜೋಳ ಖರೀದಿ ಕೇಂದ್ರವನ್ನು ತೆರೆಯಬೇಕು. ಗೋವಿನಜೋಳಕ್ಕೆ ₹೩ ಸಾವಿರ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿ ನಿಗದಿಪಡಿಸಬೇಕು. ಕೃಷಿ ಮಂತ್ರಿಗಳು ಹಾಗೂ ಪ್ರತಿಪಕ್ಷದ ನಾಯಕರು ರಾಜಕೀಯ ಕೆಸರೆರಚಾಟ ನಡೆಸುತ್ತಾ ಬೆಂಬಲ ಬೆಲೆ ನೀಡದೇ ಖರೀದಿ ಕೇಂದ್ರ ತೆರೆಯದೇ ರೈತರಿಗೆ ಸಮಾಧಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ಕಳೆದ ವರ್ಷ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹೨೪೦೦ರಿಂದ ₹೨೮೦೦ ಬೆಲೆ ಸಿಕ್ಕಿತ್ತು. ಆದರೆ ಈ ವರ್ಷ ಹಾಕಿದ ಬಂಡವಾಳ ಸಹ ಬರದಂತಾಗಿದೆ. ಬರೀ ಸಾಲದ ಸುಳಿಯಲ್ಲಿಯೇ ಸಿಲುಕಿ ದಿನ ದೂಡುವಂತಾಗಿದೆ. ಸಾಗುವಳಿ ಮಾಡಿದ ಖರ್ಚು ಮೈಮೇಲೆ ಆಗುತ್ತಿದೆ. ತಾಲೂಕಿನಾದ್ಯಂತ ಈ ಬಾರಿ ಗುರಿಗಿಂತಲೂ ಹೆಚ್ಚಿ ಪ್ರದೇಶದಲ್ಲಿ ಅಂದರೆ ೩೦.೯೧೯ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಪರಿಸ್ಥಿತಿ ಅರಿತ ದಲ್ಲಾಳಿಗಳು ಮತ್ತು ಖರೀದಿದಾರರು ಯೋಗ್ಯ ಬೆಲೆನೀಡಿ ಖರೀದಿ ಮಾಡುತ್ತಿಲ್ಲ. ಇದು ರೈತರಿಗೆ ದೊಡ್ಡ ಅನ್ಯಾಯವಾಗುತ್ತಿದೆ ಎಂದರು.ಮುಖಂಡರಾದ ತಿಪ್ಪಣ್ಣ ಕೊಂಚಿಗೇರಿ, ರವಿಕಾಂತ ಅಂಗಡಿ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ವರ್ಷ ಅತ್ಯಧಿಕ ಮಳೆಯಿಂದ ಆರ್ಧಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ಉಳಿದಿರುವ ಅಲ್ಪಸ್ವಲ್ಪ ಬೆಳೆಗೆ ಸೂಕ್ತ ಬೆಲೆ ಸಿಗದೇ ರೈತರು ತತ್ತರಿಸಿದ್ದಾರೆ. ಬೆಂಬಲ ಬೆಲೆಯಲ್ಲಿ ಗೋವಿನಜೋಳ ಖರೀದಿಸುವ ಮೂಲಕ ಸರ್ಕಾರ ರೈತರ ನೆರವಿಗೆ ಬರಬೇಕು ಎಂದರು.

ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳಕ್ಕೆ ₹೨೪೦೦ ಘೋಷಣೆ ಮಾಡಿದೆ. ಜತೆಗೆ ರಾಜ್ಯ ಸರ್ಕಾರ ₹೬೦೦ ಪ್ರೋತ್ಸಾಹಧನದಂತೆ ಒಟ್ಟು ₹೩ ಸಾವಿರಕ್ಕೆ ಕ್ವಿಂಟಲ್ ಖರೀದಿಗೆ ಕ್ರಮ ಕೈಗೊಳ್ಳಬೇಕು. ಇಷ್ಟು ದರ ರೈತರಿಗೆ ಸಿಕ್ಕರೆ ರೈತರ ಸಂತಸಕ್ಕೆ ಪಾರವೇ ಇರುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಆವಕ ಹೆಚ್ಚಳವಾಗಿದೆ ಎನ್ನುವ ಕಾರಣ ಮುಂದೆ ಮಾಡಿ ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳು ಬೆಲೆ ಪಾತಾಳಕ್ಕೆ ಇಳಿಸಿದ್ದಾರೆ ಎಂದು ಆರೋಪಿಸಿದರು.

ಶಿರಸ್ತೇದಾರ ಗಿರಿಜಾ ಪೂಜಾರ, ಎಚ್.ಜೆ. ಭಾವಿಕಟ್ಟಿ ಮನವಿ ಸ್ವೀಕರಿಸದರು. ಮನವಿ ನೀಡುವಲ್ಲಿ ಗೂಳಪ್ಪ ಕರಿಗಾರ, ಸಂದೀಪ ಕಪ್ಪತ್ತನವರ, ಯಲ್ಲಪ್ಪ ಇಂಗಳಗಿ, ಫಕ್ಕೀರೇಶ ಕರಿಗಾರ, ಸುರೇಶ ಹವಳದ, ಫಕ್ಕಿರೇಶ ನಿಟ್ಟಾಲಿ, ಕಾಳಪ್ಪ ಬಡಿಗೇರ, ಫಕ್ಕೀರೇಶ ಡಂಬಳ, ಫಕ್ಕೀರೇಶ ಸಂಶಿಮಠ, ರಾಜೇಶ ಸರ್ಜಾಪೂರ, ಪ್ರಕಾಶ ಕುಳಗೇರಿ, ಶಿವಾನಂದ ಬಟ್ಟೂರ, ಬಸವರಾಜ ಕಲ್ಯಾಣಿ, ಪರಶುರಾಮ ಡೊಂಕಬಳ್ಳಿ, ರವಿ ಹಳ್ಳಿ, ನಾಗರಾಜ ಇಂಗಳಗಿ, ಕೆ.ಬಿ. ಬಳುಟಗಿ ಇತರರು ಮನವಿ ನೀಡುವಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ