ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು: ಶ್ರೀರಾಮುಲು

KannadaprabhaNewsNetwork |  
Published : Nov 14, 2025, 03:00 AM IST
ಸಸಸಸಸ | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೇಂದ್ರದ ಕುರಿತು ಮಾತನಾಡುವುದು ಬಿಟ್ಟು ಬೇರೆ ವಿಷಯ ಇಲ್ಲ. ಪದೇ ಪದೇ ಕೇಂದ್ರದ ಮೇಲೆಯೇ ಗೂಬೆ ಕೂರಿಸುವುದಕ್ಕಾಗಿ ನೋಡುತ್ತಾರೆಯೇ ಹೊರತು ತಮ್ಮದೇನು ತಪ್ಪು ಎನ್ನುವ ಅರಿವಿಲ್ಲ

ಕೊಪ್ಪಳ: ದೆಹಲಿ ಬಾಂಬ್ ಸ್ಫೋಟದಲ್ಲಿಯೂ ಕಾಂಗ್ರೆಸ್ ಮುಖಂಡ ಬಸವರಾಜ ರಾಯರಡ್ಡಿ ಸೇರಿದಂತೆ ಅನೇಕ ನಾಯಕರು ರಾಜಕೀಯ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ತೀವ್ರ ವಾಗ್ದಾಳಿ ಮಾಡಿದ್ದಾರೆ.

ಮುನಿರಾಬಾದ್ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ವಿಧ್ವಂಸಕ ಕೃತ್ಯ ಪತ್ತೆ ಮಾಡಿ ತಡೆದಿದ್ದು, ಅದರಲ್ಲಿ ತಪ್ಪಿಸಿಕೊಂಡು ಬಂದಿರುವ ಓರ್ವನಿಂದ ದೆಹಲಿಯಲ್ಲಿ ಸ್ಫೋಟವಾಗಿದೆ. ಇಡೀ ಪ್ರಕರಣವನ್ನು 24 ಗಂಟೆಯಲ್ಲಿ ಜಾಲಾಡಿದ್ದಾರೆ. ಇಂಥ ಸ್ಥಿತಿಯಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೇಂದ್ರದ ಕುರಿತು ಮಾತನಾಡುವುದು ಬಿಟ್ಟು ಬೇರೆ ವಿಷಯ ಇಲ್ಲ. ಪದೇ ಪದೇ ಕೇಂದ್ರದ ಮೇಲೆಯೇ ಗೂಬೆ ಕೂರಿಸುವುದಕ್ಕಾಗಿ ನೋಡುತ್ತಾರೆಯೇ ಹೊರತು ತಮ್ಮದೇನು ತಪ್ಪು ಎನ್ನುವ ಅರಿವಿಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕುರಿತು ಮಾತನಾಡುವುದನ್ನು ಬಿಡಲಿ ಎಂದರು.

ರಾಜ್ಯದಲ್ಲಿನ ಪರಪ್ಪನ ಅಗ್ರಹಾರದಲ್ಲಿ ಏನಾಗುತ್ತಿದೆ ಎನ್ನುವುದು ಜಗತ್ತಿಗೆ ಗೊತ್ತಾಗಿದೆ. ರಾಯರಡ್ಡಿ ಅವರು ಈ ವಿಷಯದ ಕುರಿತು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಜೈಲಿನಲ್ಲಿದ್ದವರು ರೆಸಾರ್ಟ್‌ನಲ್ಲಿ ಕುಣಿದು ಕುಪ್ಪಳಿಸಿದಂತೆ ಕುಣಿಯುತ್ತಿದ್ದಾರೆ. ಇದ್ಯಾವುದೂ ಅವರ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಡ್ಯಾಮ್‌ಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ತೀವಿ

ಕೊಪ್ಪಳ: ತುಂಗಭದ್ರಾ ಜಲಾಶಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ತಾತನ ಆಸ್ತಿಯಲ್ಲ. ಜಲಾಶಯದಲ್ಲಿ ನೀರಿದ್ದರೂ ಎರಡನೇ ಬೆಳೆಗೆ ನೀರು ಕೊಡದಿದ್ದರೆ ಅದೇ ಡ್ಯಾಮ್‌ಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುನಿರಾಬಾದ್ ಬಳಿ ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಬಿಜೆಪಿ ಸರ್ಕಾರ ಇದ್ದಾಗ ಪ್ರತಿ ಬಾರಿ ಎರಡು ಬೆಳೆಗೆ ನೀರು ಕೊಟ್ಟಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಸಮಸ್ಯೆಯಾಗುತ್ತದೆ. ಈಗ ನೀರಿದ್ದರೂ ಬಿಡುವುದಿಲ್ಲ ಎಂದರೆ ಸುಮ್ಮನೆ ಕೂರಲೂ ಆಗಲ್ಲ. ರೈತರ ಹಿತಕ್ಕಾಗಿ ಎಂಥ ಹೋರಾಟಕ್ಕೂ ಸಿದ್ಧ ಎಂದರು.

ಕ್ರಸ್ಟ್‌ಗೇಟ್‌ ದುರಸ್ತಿ ಕುರಿತು ಈ ಹಿಂದೆಯೇ ಎಚ್ಚರಿಸಿದ್ದರೂ ಕ್ರಮವಹಿಸಿಲ್ಲ. ಬೇಸಿಗೆಯಲ್ಲಿ ಮಾಡಬೇಕಾದ ಕೆಲಸವನ್ನು ನೀರಿದ್ದಾಗ ಮಾಡುತ್ತೇವೆ ಎಂದರೆ ಏನರ್ಥ? ಈ ಹಿಂದೆ ಜಲತಜ್ಞರು ಎಚ್ಚರಿಸಿದರೂ ಮಲಗಿದ್ದ ಸರ್ಕಾರ, ಈಗ ರೈತರಿಗೆ ತೊಂದರೆ ಕೊಡುತ್ತಿದೆ. ಅದನ್ನು ಸಹಿಸಿಕೊಂಡು ಸುಮ್ಮನೇ ಇರಲ್ಲ ಎಂದರು.

ರಾಜಕೀಯ ಮಾಡಬಾರದು: ಹಾಲಪ್ಪ ಆಚಾರ್

ಕೊಪ್ಪಳ: ದೆಹಲಿ ಬಾಂಬ್ ಸ್ಫೋಟದಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಮುನಿರಾಬಾದ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆ ಗೊತ್ತಿದ್ದರೆ ಮತ್ತು ಅದನ್ನು ನಮ್ಮ ಗೃಹ ಇಲಾಖೆಯ ಪತ್ತೆ ಮಾಡಿದ ರೀತಿ ಗೊತ್ತಿದ್ದರೆ ಹೀಗೆ ಮಾತನಾಡುತ್ತಿರಲಿಲ್ಲ ಎಂದರು.

ಈ ಹಿಂದೆ ತಾಜ್ ಹೋಟೆಲ್‌ನಲ್ಲಿ ದಾಳಿಯಾದಾಗ ಯಾವ ಸರ್ಕಾರ ಇತ್ತು? ಆಗ ಯಾರು ರಾಜೀನಾಮೆ ನೀಡಿದ್ದರು? ದೇಶದ ವಿಷಯದಲ್ಲಿಯೂ ರಾಜಕೀಯ ಮಾಡುವುದನ್ನು ಬಿಡಬೇಕು. ಉಗ್ರರನ್ನು ಮಟ್ಟ ಹಾಕಲು ಈಗಾಗಲೇ ಕೇಂದ್ರ ಸರ್ಕಾರ ದೃಢ ನಿರ್ಧಾರ ಮಾಡಿದೆ. ವಿಧ್ವಂಸಕ ಕೃತ್ಯಗಳನ್ನು ಮೊದಲೇ ಪತ್ತೆ ಮಾಡಿ, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ