ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.13ರಂದು ಜರುಗಿದ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯು ಯಶಸ್ವಿಯಾಗಿ ನಡೆದಿದ್ದು,
ಈ ಸೇನಾ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಬೆಂಗಳೂರು ಆರ್‌ಓ ಕಚೇರಿ ವ್ಯಾಪ್ತಿಯ 13 ಜಿಲ್ಲೆಗಳ ಸುಮಾರು 400 ಯುವಕರು ಉತ್ಸಾಹದಿಂದ ಭಾಗಿಯಾಗಿದ್ದರು.ರ‍್ಯಾಲಿ ನಡೆಯುವ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಅಭ್ಯರ್ಥಿಗಳು ವರದಿ ಮಾಡಿಕೊಂಡು ಶಾರೀರಿಕ ಪರೀಕ್ಷೆ, ಓಟ, ದೈಹಿಕ ಸಾಮರ್ಥ್ಯ ಪರೀಕ್ಷೆ ಸೇರಿದಂತೆ ವಿವಿಧ ರೀತಿಯ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿ 200 ಯುವಕರು ಮುಂದಿನ ಹಂತಕ್ಕೆ ಆಯ್ಕೆಯಾದರು.ಈ ಸೇನಾ ರ‍್ಯಾಲಿ ಪ್ರಕ್ರಿಯೆಯನ್ನು ಮೊದಲನೇ ದಿನ ಸೇನಾ ನೇಮಕಾತಿ ಮಂಡಳಿ ಅಧಿಕಾರಿಗಳು ಶಿಸ್ತುಬದ್ಧವಾಗಿ ಮುನ್ನಡೆಸಿದರು. ಅಗ್ನಿವೀರ್ ಸೇನೆಗಾಗಿ ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದರು.
ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ರಾಜ್ಯದ ವಿವಿಧೆಡೆಯಿಂದ ಆಗಮಿಸುವವರಿಗೆ ಮಾರ್ಗದರ್ಶನ ಮಾಡಲು ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿತ್ತು. ರ‍್ಯಾಲಿಯಲ್ಲಿ ಭಾಗವಹಿಸಲು ದೂರದ ಪ್ರದೇಶಗಳಿಂದ ಆಗಮಿಸುವ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ನಗರದ ವಾಲ್ಮೀಕಿ ಭವನ, ಡಾ.ಬಾಬು ಜಗನ್ ಜೀವನ್ ರಾಂ ಭವನ, ಜಿಲ್ಲಾ ಕ್ರೀಡಾಂಗಣ, ಸರ್ಕಾರಿ ಅತಿಥಿಗೃಹ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ರಾತ್ರಿ ತಂಗುದಾಣಗಳಲ್ಲಿ ತಂಗಲು ವಸತಿ ಜೊತೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಕ್ರೀಡಾಂಗಣದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್, ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ, ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗಿತ್ತು. ಬೆಳಿಗ್ಗೆ 5 ಗಂಟೆಯಿಂದಲೇ ಶುರುಗೊಂಡ ಆಯ್ಕೆ ಪ್ರಕ್ರಿಯೆ, ಸಂಜೆ 6 ಗಂಟೆಯವರೆಗೆ ನಡೆಯಿತು. ನ.18ರವರೆಗೆ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ನಡೆಯಲಿದೆ.