ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಡಿಸಿ ತೊಲಗಲಿ

KannadaprabhaNewsNetwork | Published : Apr 21, 2025 12:58 AM

ಸಾರಾಂಶ

ಬಗುರ್‌ಹುಕುಂ ಸಾಗುವಳಿ ಅರ್ಜಿ ಸಲ್ಲಿಸಿರುವ ರೈತರಿಗೆ ಅನ್ಯಾಯ ಮಾಡಿ ರೈತ ವಿರೋಧಿ ನೀತಿ ಅನುಸರಿಸುತ್ತಿರುವ ರಾಮನಗರ ಜಿಲ್ಲಾಧಿಕಾರಿಗಳು ಕೂಡಲೇ ಇಲ್ಲಿಂದ ತೊಲಗಲಿ ಎಂದು ರೈತ ಸಂಘ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ಬಗುರ್‌ಹುಕುಂ ಸಾಗುವಳಿ ಅರ್ಜಿ ಸಲ್ಲಿಸಿರುವ ರೈತರಿಗೆ ಅನ್ಯಾಯ ಮಾಡಿ ರೈತ ವಿರೋಧಿ ನೀತಿ ಅನುಸರಿಸುತ್ತಿರುವ ರಾಮನಗರ ಜಿಲ್ಲಾಧಿಕಾರಿಗಳು ಕೂಡಲೇ ಇಲ್ಲಿಂದ ತೊಲಗಲಿ ಎಂದು ರೈತ ಸಂಘ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಜಮಾವಣೆಗೊಂಡ ರೈತ ಸಂಘದ ಮುಖಂಡರು ಹಾರೋಹಳ್ಳಿ-ಮರಳವಾಡಿ ಭಾಗದ ರೈತರಿಗೆ ಬಗರ್‌ಹುಕುಂ ಸಾಗುವಳಿ ಪತ್ರ ವಿತರಿಸಲು ತಾರತಮ್ಯ ಮಾಡುವ ಮೂಲಕ ರೈತರನ್ನು ಸಮಾಧಿ ಮಾಡಲು ಹೊರಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಮುಖಂಡರಾದ ವಕೀಲ ಚಂದ್ರಶೇಖರ್, ಚೀಲೂರು, ಹರೀಶ್, ಜಿಲ್ಲಾಧ್ಯಕ್ಷ ದೇವರಾಜು ಮಾತನಾಡಿ, ಹಾರೋಹಳ್ಳಿ ತಾಲೂಕಿನ ರೈತರ ಬಗರ್ ಹುಕುಂ ಸಾಗುವಳಿ ಸಮಸ್ಯೆಯ ವಾಸ್ತವಾಂಶ ಮರೆಮಾಚಿದ್ದಾರೆ. ಎರಡು ಸಾವಿರಕ್ಕೂ ರೈತರ ಅರ್ಜಿ ಬಾಕಿ ಉಳಿದಿವೆ, ಆದರೂ ಅರ್ಜಿ ವಿಲೇವಾರಿ ಗಣಕೀಕೃತವಾಗದೆ ಶೂನ್ಯ ವ್ಯವಸ್ಥೆಯಲ್ಲಿ ಅರ್ಜಿಗಳ ಬಾಕಿ ಇದೆ ಎಂದು ತಪ್ಪು ಮಾಹಿತಿ ನೀಡಿರುವುದು ಜಿಲ್ಲಾಧಿಕಾರಿಗಳ ದುರುದ್ದೇಶದ ವರದಿಯಾಗಿದೆ. ಆದರೆ ಜಿಲ್ಲೆಯ ಕನಕಪುರ ತಾಲೂಕಿಗೆ ಮಾತ್ರ ವಿಶೇಷ ಆದ್ಯತೆಯ ಮೇರೆಗೆ ಬಗರ್‌ಹುಕುಂ ಸಾಗುವಳಿ ಪತ್ರ ವಿತರಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಅಲ್ಲಿಗಿರುವ ನಿಯಮ ಬೇರೆ ತಾಲೂಕಿಗೆ ಏಕೆ ಇಲ್ಲ ಎಂದು ಪ್ರಶ್ನಿಸಿದರು.

ಹಲವಾರು ವರ್ಷಗಳಿಂದ ರೈತರು ಸಲ್ಲಿಸಿದ್ದ ಅರ್ಜಿಗಳು ಏನಾಗಿವೆ, ಎಲ್ಲಿವೆ ಎಂದು ಹೇಳಿಬೇಕು. ಸಾಗುವಳಿಗಾಗಿ ಫಾರಂ ನಂ. 53ರಡಿ ಅರ್ಜಿ ಸಲ್ಲಿಸಿರುವ ನಕಲು ದಾಖಲಾತಿಗಳು ರೈತರ ಬಳಿ ಇದ್ದರೂ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಯಾವುದೇ ಅರ್ಜಿ ಬಾಕಿ ಇಲ್ಲ ಎಂದು ತಿಳಿಸುತ್ತಿರುವುದು ನಾಚಿಗೇಡಿನ ಸಂಗತಿ. ರೈತರ ಹಿತ ಕಾಯಬೇಕಾದ ತಾಲೂಕು ಮತ್ತು ಜಿಲ್ಲಾಡಳಿತ ರೈತ ವಿರೋಧಿ ನೀತಿ ಅನುಸರಿಸುತ್ತಿರುವುದು ರೈತರಿಗೆ ಮಾಡುತ್ತಿರುವ ಮೋಸವಾಗಿದೆ. ಕೂಡಲೇ ಈ ತಾರತಮ್ಯ ನೀತಿಯನ್ನು ಬಿಟ್ಟು ಬಾಕಿ ಉಳಿದಿರುವ ಸಾಗುವಳಿ ಚೀಟಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಾಲೂಕು ಕಚೇರಿ ಮುಂದೆ ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ್, ಮಾಜಿ ಅಧ್ಯಕ್ಷ ಅನಂತರಾಮ್‌ ಪ್ರಸಾದ್, ಮುಖಂಡರಾದ ಗಜೇಂದ್ರ ಸಿಂಗ್, ಹೊನ್ನೇಗೌಡ, ಚೀಲೂರು ಕುಮಾರ್, ಆನಂದ್ ರಾವ್, ರಾಮಣ್ಣ, ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article