ಧಾರವಾಡ ಜಿಲ್ಲಾಸ್ಪತ್ರೆಗೆ ಡಿಸಿ ಭೇಟಿ, ಸೂಕ್ತ ಚಿಕಿತ್ಸೆಗೆ ಸೂಚನೆ

KannadaprabhaNewsNetwork |  
Published : Jan 08, 2025, 12:16 AM IST
7ಡಿಡಬ್ಲೂಡಿ11,12ಧಾರವಾಡ ಜಿಲ್ಲಾಸ್ಪತ್ರೆಯ ತಾಯಿ-ಮಕ್ಕಳ ವಿಭಾಗಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು | Kannada Prabha

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ ಗರ್ಭಿಣಿಯರ ಸಾವಿನ ಪ್ರಮಾಣ ಕಡಿಮೆ ಇದೆ. ಈಗ ಆಗುತ್ತಿರುವ ಸಾವುಗಳನ್ನು ನಿಯಂತ್ರಿಸಲು ಸೂಕ್ತ ಮುಂಜಾಗೃತೆ ವಹಿಸಲಾಗುತ್ತಿದೆ ಎಂದ ಜಿಲ್ಲಾಧಿಕಾರಿ ಹೇಳಿದ್ದಾರೆ.

ಧಾರವಾಡ:

ಗರ್ಭಿಣಿ, ಬಾಣಂತಿ ಹಾಗೂ ನವಜಾತ ಶಿಶುಗಳಿಗೆ ಸಕಾಲಕ್ಕೆ ಅಗತ್ಯ ಚಿಕಿತ್ಸೆ, ಔಷಧಿ ನೀಡಿ, ಯಾವುದೇ ಸಾವು-ನೋವು ಆಗದಂತೆ ವೈದ್ಯರು ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಮಂಗಳವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಗೆ ಆಗಮಿಸಿದ್ದ ರೋಗಿಗಳು, ಪಾಲಕರನ್ನು ಮಾತನಾಡಿಸಿದ ಅವರು, ಜಿಲ್ಲಾಸ್ಪತ್ರೆ ವೈದ್ಯರ ಸ್ಪಂದನೆ, ಚಿಕಿತ್ಸೆಗಳ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆದುಕೊಂಡರು. ಶೌಚಾಲಯಗಳಿಗೆ ಭೇಟಿ ನೀಡಿ, ನೀರು, ನೈರ್ಮಲ್ಯ ಕಾಪಾಡುವಂತೆ ಮತ್ತು ಶೌಚಾಲಯಗಳನ್ನು ನಿರಂತರವಾಗಿ ಸ್ವಚ್ಛಗೊಳಿಸುವಂತೆ ತಿಳಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗಾಗಿ 250 ಹಾಸಿಗೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆಯ 100 ಹಾಸಿಗೆ ಸೇರಿ ಒಟ್ಟು 350 ಬೆಡ್ ವ್ಯವಸ್ಥೆ ಇದೆ. ಪ್ರತಿದಿನ 1,100ದಿಂದ 1,7000 ಹೊರರೋಗಿಗಳು ನೋಂದಣಿ ಮಾಡಿಕೊಳ್ಳುತ್ತಾರೆ. ಅಂದಾಜು ಪ್ರತಿದಿನ 150 ಜನರಿಗೆ ಎಕ್ಸರೇ, 35 ಜನರಿಗೆ ಒಬಿಜಿ ಸ್ಕ್ಯಾನ್, 80 ಜನರಿಗೆ ಜನರಲ್ ಸ್ಕ್ಯಾನ್, 25 ಜನರಿಗೆ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ. ಪ್ರತಿ ತಿಂಗಳು ಸರಾಸರಿ 450ಕ್ಕೂ ಹೆಚ್ಚು ಹೆರಿಗೆ ಆಗುತ್ತವೆ. 400ಕ್ಕೂ ಹೆಚ್ಚು ಜನರು ಶಸ್ತ್ರಚಿಕಿತ್ಸೆಗೆ ಒಳಪಡುತ್ತಾರೆ ಎಂದರು.

ಗರ್ಭಿಣಿಯರ ಸಾವು:

ಜಿಲ್ಲೆಯಲ್ಲಿ ಗರ್ಭಿಣಿಯರ ಸಾವಿನ ಪ್ರಮಾಣ ಕಡಿಮೆ ಇದೆ. ಈಗ ಆಗುತ್ತಿರುವ ಸಾವುಗಳನ್ನು ನಿಯಂತ್ರಿಸಲು ಸೂಕ್ತ ಮುಂಜಾಗೃತೆ ವಹಿಸಲಾಗುತ್ತಿದೆ ಎಂದ ಜಿಲ್ಲಾಧಿಕಾರಿ, ಉತ್ತರಕನ್ನಡ, ಬೆಳಗಾವಿ, ಬಾಗಲಕೋಟ, ಗದಗ ಮತ್ತು ಹಾವೇರಿ ಜಿಲ್ಲೆಯ ರೋಗಿಗಳು, ಗರ್ಭಿಣಿಯರು ಇಲ್ಲಿಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಏ. 2024ರಿಂದ ಡಿಸೆಂಬರ್‌ ವರೆಗೆ ಜಿಲ್ಲೆಯ 11 ಹಾಗೂ ಹೊರ ಜಿಲ್ಲೆಯ 24 ಸೇರಿ ಒಟ್ಟು 35 ಗರ್ಭಿಣಿಯರು ಸಾವನ್ನಪ್ಪಿದ್ದಾರೆ. ಹೊರ ಜಿಲ್ಲೆಯಿಂದ ಶಿಫಾರಸು ಆಗುವ ಪ್ರಕರಣಗಳಲ್ಲಿ ಬಿಪಿ, ರಕ್ತಸ್ರಾವ, ಎಪಿಎಚ್, ಪಿಪಿಎಚ್ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅಲ್ಲಿನ ವೈದ್ಯರು ಪರಿಸ್ಥಿತಿ ಕೈ ಮೀರಿದಾಗ ಕೊನೆಯ ಹಂತದಲ್ಲಿ ರೋಗಿಗಳನ್ನು ಇಲ್ಲಿಗೆ ಕಳಿಸುವುದರಿಂದ ಈ ಸಮಸ್ಯೆ ಆಗುತ್ತಿದೆ. ಜಿಲ್ಲಾಸ್ಪತ್ರೆ ಸೇರಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ, ಔಷಧೋಪಚಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ ಅಪೌಷ್ಟಿಕತೆ ಅಂದಾಜು 85 ಮಕ್ಕಳಿದ್ದು, ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೂಕ್ತ ಚಿಕಿತ್ಸೆ, ಆರೈಕೆ ಮಾಡಲಾಗುತ್ತಿದೆ. ವಿವಿಧ ತಾಲೂಕುಗಳಾದ ಗ್ರಾಮೀಣ 16, ಹುಬ್ಬಳ್ಳಿ ಗ್ರಾಮೀಣ 3, ಹುಬ್ಬಳ್ಳಿ ಧಾರವಾಡ ಶಹರ 41, ಕಲಘಟಗಿ 12, ಕುಂದಗೋಳ 3 ಹಾಗೂ ನವಲಗುಂದ 10 ಮಕ್ಕಳು ಇದ್ದಾರೆ. ಈ ಎಲ್ಲ ಮಕ್ಕಳು ಪೌಷ್ಟಿಕವಾಗಿ ಬೆಳೆಯುವಂತೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆರೋಗ್ಯಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸುಜಾತ ಹಸವೀಮಠ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ