ಮಕ್ಕಳ ಹಕ್ಕುಗಳ ಗ್ರಾಮ ಸಭೆಯ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ
ಕನ್ನಡಪ್ರಭ ವಾರ್ತೆ ಯಲಬುರ್ಗಾಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಅನುಷ್ಠಾನಕ್ಕೆ ತರುವ ಮೂಲಕ ಅವರೆಲ್ಲರ ಹಿತ ಕಾಪಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ಮಕ್ಕಳ ಹಕ್ಕುಗಳ ಗ್ರಾಮ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಜತೆಗೆ ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅವರ ಹಕ್ಕಾಗಿದೆ ಎಂದರು.
ಯಾವೊಬ್ಬ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತಂದು ಶಿಕ್ಷಣ ಕೊಡಿಸಬೇಕು. ಹೆತ್ತ ತಂದೆ-ತಾಯಿಗಳು ಹೊಲ ಮತ್ತು ತೋಟದ ಕೆಲಸಗಳಿಗೆ ಮಕ್ಕಳನ್ನು ಬಳಕೆ ಮಾಡುವುದು ಅಪರಾಧವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹ ಪದ್ಧತಿ ಇರುವುದರಿಂದ ಮಕ್ಕಳ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ. ಇದಕ್ಕೆ ಕಡಿವಾಣ ಹಾಕಲು ಸಮಾಜದಲ್ಲಿ ಎಲ್ಲರೂ ಕೈಜೋಡಿಸಬೇಕು. ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಕಾನೂನು ವಿರುದ್ಧ ಅಗಿದ್ದು, ಸರ್ಕಾರ ಗ್ರಾಪಂ ಮೂಲಕ ಕಾವಲು ಸಮಿತಿ ರಚಿಸಿ ಮಕ್ಕಳ ರಕ್ಷಣೆ ಹೊಣೆ ಒದಗಿಸಿದೆ. ಇಂದಿನ ಮಕ್ಕಳನ್ನು ಮುಂದಿನ ಪ್ರಜೆಗಳಾಗಿ ರೂಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.ತಾಪಂ ಇಒ ಸಂತೋಷ ಬಿರಾದಾರ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಹಕ್ಕುಗಳ ಸಭೆ ನಡೆಸುತ್ತಿದ್ದು, ಯಾವುದೇ ರೀತಿ ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ಕಾವಲು ಸಮಿತಿ ಉತ್ತಮ ಕೆಲಸ ಮಾಡುತ್ತಿದೆ. ಹಾಗೆ ನರೇಗಾ ಯೋಜನೆಯಡಿ ಕೂಲಿಕಾರ್ಮಿಕರಿಗೆ ಕೆಲಸ ನೀಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಮಾಜದ ಸುಧಾರಣೆಗೆ ಶಿಕ್ಷಣ ಬುನಾದಿಯಾಗಿದ್ದು, ಮಕ್ಕಳಿಗೆ ಅಕ್ಷರ ಅಭ್ಯಾಸ ಕಲಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಎಚ್. ವಾದಿ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಭಾವಿಕಟ್ಟಿ, ರಾಬಕೊ ಹಾಲು ಒಕ್ಕೂಟದ ನಿರ್ದೇಶಕ ಶಿವಪ್ಪ ವಾದಿ, ಮುಖ್ಯಶಿಕ್ಷಕ ಕಲ್ಲಯ್ಯ ಕೋಚಲಾಪೂರ, ಸಂಗಯ್ಯ ಹಿರೇಮಠ, ಭೂದಾನಿ ಅಮರೇಶಪ್ಪ ವಾದಿ, ಸಮಾಜ ಕಲ್ಯಾಣಾಧಿಕಾರಿ ಶಶಿಧರ ಸಕ್ರಿ, ಮಹಾಂತಸ್ವಾಮಿ ಪೂಜಾರ, ಬಿಸಿಎಂ ಶಿವಶಂಕರ ಕರಡಕಲ್, ಸಾರಿಗೆ ಘಟಕ ವ್ಯವಸ್ಥಾಪಕ ಸಣ್ಣಕುಂಟೆಪ್ಪ ಹಾಲೂರ, ಅಂಗನವಾಡಿ ಮೇಲ್ವಿಚಾರಕಿ ಗಂಗಮ್ಮ ಮೇಟಿ, ಅಕ್ಷರ ದಾಸೋಹ ಅಧಿಕಾರಿ ಟಿ.ಜೆ. ದಾನಿ, ಕಾರ್ಮಿಕ ನಿರೀಕ್ಷಕಿ ನಿವೇದಿತಾ, ಎಎಸ್‌ಐ ಇಮಾಮಸಾಬ, ಪಿಡಿಒ ಸೋಮಪ್ಪ ಪೂಜಾರ ಹಾಗೂ ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಪದಾಧಿಕಾರಿಗಳು ಮಕ್ಕಳು ಇದ್ದರು.