ಆಗಾಗ ಕುಸಿಯುವ ಶಿರಾಡಿ ಹೆದ್ದಾರಿಗೆ ಡಿಸಿ ಭೇಟಿ

KannadaprabhaNewsNetwork |  
Published : Jun 25, 2025, 11:47 PM IST
25ಎಚ್ಎಸ್ಎನ್3ಎ : ಆಲೂರು ತಾಲೂಕಿನ ರಿಹಳ್ಳಿ,ಶಿರಗಾವರ ರಸ್ತೆಯ ಪಕ್ಕದಲ್ಲಿದ್ದ ಈ ಬೃಹತ್ ಮರ ಲಕ್ಷಮಣೇಗೌಡ ಎಂಬುವವರ ಮನೆ ಮೇಲೆ ಬಿದ್ದಿರುವುದು. | Kannada Prabha

ಸಾರಾಂಶ

ಮಳೆಗಾಲದಲ್ಲಿ ಭೂಕುಸಿತ ಸಂಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗಾಗಲೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವುದರಿಂದ ಹೆದ್ದಾರಿಯ ಸಾಕಷ್ಟು ಭಾಗದಲ್ಲಿ ಭೂಕುಸಿತ ಸಂಭವಿಸುತ್ತಿದೆ. ಸದ್ಯ ಮಳೆಯಾಗುತ್ತಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಆದರೆ, ಸಂಭಾವ್ಯ ಅವಘಡ ಸಂಭವಿಸಬಹುದಾದ ಸ್ಥಳಗಳಲ್ಲಿ ಅಧಿಕಾರಿಗಳ ಪಡೆ ಸರ್ವ ಸನ್ನದ್ಧವಾಗಿರುವಂತೆ ಸೂಚನೆ ನೀಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಮಳೆಗಾಲದಲ್ಲಿ ಭೂಕುಸಿತ ಸಂಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ರಾಷ್ಟ್ರೀಯ ಹೆದ್ದಾರಿ ೭೫ರ ಮಠಸಾಗರ, ಕೊಲ್ಲಹಳ್ಳಿ, ಆನೇಮಹಲ್, ದೋಣಿಗಾಲ್, ಕಪ್ಪಳ್ಳಿ ಹಾಗೂ ದೊಡ್ಡತಪ್ಲೆ ಗ್ರಾಮದಲ್ಲಿ ಹೆದ್ದಾರಿ ವೀಕ್ಷಣೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈಗಾಗಲೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವುದರಿಂದ ಹೆದ್ದಾರಿಯ ಸಾಕಷ್ಟು ಭಾಗದಲ್ಲಿ ಭೂಕುಸಿತ ಸಂಭವಿಸುತ್ತಿದೆ. ಸದ್ಯ ಮಳೆಯಾಗುತ್ತಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಆದರೆ, ಸಂಭಾವ್ಯ ಅವಘಡ ಸಂಭವಿಸಬಹುದಾದ ಸ್ಥಳಗಳಲ್ಲಿ ಅಧಿಕಾರಿಗಳ ಪಡೆ ಸರ್ವ ಸನ್ನದ್ಧವಾಗಿರುವಂತೆ ಸೂಚನೆ ನೀಡಲಾಗಿದೆ ಎಂದರು.

ಆನೇಮಹಲ್ ಗ್ರಾಮದ ಅಡಾಣಿಗುಡ್ಡ ಪ್ರದೇಶದಲ್ಲಿರುವ ಜನರ ಸ್ಥಳಾಂತಕ್ಕೆ ಈಗಾಗಲೇ ಸೂಚನೆ ನೀಡಿದ್ದು, ಇಲ್ಲಿನ ಜನರಿಗೆ ಸೂಕ್ತ ಪರಿಹಾರ ನೀಡಲು ಅಂಕಿಅಂಶ ಸಿದ್ಧಪಡಿಸುವಂತೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ಇವರು ವರದಿ ನೀಡಿದ ತಕ್ಷಣ ಇಲ್ಲಿನ ನಿವಾಸಿಗಳಿಗೆ ಪರಿಹಾರ ನೀಡಲಾಗುವುದು ಎಂದರು.

ಬುಧವಾರ ತಾಲೂಕಿನಾದ್ಯಂತ ಆರಿಧ್ರ್ಯಾ ಮಳೆಯ ಅಬ್ಬರ ಮುಂದುವರಿದಿದ್ದು, ಗಾಳಿಯೊಂದಿಗೆ ಮಳೆಯು ಸುರಿಯುತ್ತಿರುವುರಿಂದ ತಾಲೂಕಿನ ಇಡಿ ಗ್ರಾಮೀಣ ಭಾಗ ಸ್ತಬ್ಧಗೊಂಡಿದ್ದು ವೇಗವಾಗಿ ಬೀಸುತ್ತಿರುವ ಗಾಳಿಯಿಂದಾಗಿ ತಾಲೂಕಿನ ಶೇ. ೭೦ರಷ್ಟು ಗ್ರಾಮಗಳಲ್ಲಿ ವಿದ್ಯುತ್ ಕೈಕೊಟ್ಟಿದೆ. ಕಳೆದ ನಾಲ್ಕು ದಿನಗಳಿಂದ ಜನರು ಕತ್ತಲಲ್ಲೇ ಬದುಕು ನಡೆಸವಂತಾಗಿದೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ತಾಲೂಕಿನ ಜೀವನದಿ ಹೇಮಾವತಿಯಲ್ಲಿ ಏಳು ಅಡಿಯಷ್ಟು ನೀರು ಹರಿಯುತ್ತಿದ್ದರೆ ತಾಲೂಕಿನ ಪ್ರಮುಖ ಐದು ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದಲ್ಲದೆ ಹೆದ್ದಾರಿ ಬದಿಯ ಹಲವೆಡೆ ತಡೆಗೋಡೆ ಹಾಗೂ ಭೂಕುಸಿತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಂಭಾವ್ಯ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಅವೈಜ್ಞಾನಿಕ ಕಾಮಗಾರಿಯೇ ಕಾರಣ:

ಮಲೆನಾಡು ಎಂದರೆ ಅಲ್ಲಿ ಮಳೆ ಗಾಳಿ. ಗಾಳಿಗೆ ಮರ ಬೀಳುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಸಕಲೇಶಪುರ ರಾಜ್ಯಾದ್ಯಂತ ಸದಾ ಸುದ್ದಿಯಲ್ಲಿರುತ್ತದೆ. ಇದಕ್ಕೆ ಕಾರಣ ಶಿರಾಡಿಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ಆಗಾಗ ಭೂ ಕುಸಿತ ಆಗುತ್ತಿರುವುದು. ಇದಕ್ಕೆ ಮುಖ್ಯ ಕಾರಣ ಮಲೆನಾಡಿನಲ್ಲಿ ಬೀಳುವ ಮಳೆಯಲ್ಲ. ಬದಲಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಮಾಡಿರುವ ಅವೈಜ್ಞಾನಿಕ ಕಾಮಗಾರಿ ಕಾರಣ.

ಮಲೆನಾಡು ಎಂದರೆ ಹಾಗೆಯೇ. ಅಲ್ಲಿ ಮಾನ್ಸೂನ್‌ ಶುರುವಾಗುತ್ತಲೇ ಮಳೆ ಧೋ.. ಎಂದು ಸುರಿಯುತ್ತದೆ. ಸುಯ್‌ ಎಂದು ಗಾಳಿ ಬೀಸುತ್ತದೆ. ಆದರೆ, ಈ ಮಳೆಯಿಂದಾಗಿಯೇ ಹೆದ್ದಾರಿ ಮೇಲೆ ಗುಡ್ಡ ಕುಸಿಯುತ್ತಿದೆ ಎನ್ನುವ ಆರೋಪ ಮಾತ್ರ ಸುಳ್ಳು. ಏಕೆಂದರೆ ಈ ಮಳೆ ಶಿರಾಡಿಘಾಟಿಯ ರಾಷ್ಟ್ರೀಯ ಹೆದ್ದಾರಿ ಆಸುಪಾಸಿನಲ್ಲಿ ಮಾತ್ರ ಸುರಿಯುತ್ತಿಲ್ಲ. ಬದಲಾಗಿ ಇಡೀ ಮಲೆನಾಡಿನಲ್ಲೆಲ್ಲಾ ಸುರಿಯುತ್ತಿದೆ. ಹಾಗಾಗಿ ತಾಲೂಕಿನ ಉಳಿದೆಲ್ಲೂ ಕುಸಿಯದ ಭೂಮಿ ಶಿರಾಡಿ ಘಾಟಿಯಲ್ಲಿರುವ ಹೆದ್ದಾರಿ ಮೇಲೆ ಮಾತ್ರ ಕುಸಿಯುತ್ತಿದೆ ಎಂದರೆ ಅದಕ್ಕೆ ಕಾರಣ ಹೆದ್ದಾರಿ ಅಗಲೀಕರಣಕ್ಕಾಗಿ ಅಕ್ಕಪಕ್ಕದ ಗುಡ್ಡಗಳನ್ನು ಕಡಿದಾಗಿ ಕತ್ತರಿಸಿರುವುದೇ ಕಾರಣವಲ್ಲದೆ ಮತ್ತೇನೂ ಅಲ್ಲ.

ಸಿಎಂ ಹೇಳಿದರೂ ಅದೇ ಕಾಮಗಾರಿ:

ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದಲೂ ಶಿರಾಡಿಯಲ್ಲಿ ಭೂ ಕುಸಿತ ಆಗುತ್ತಿದೆ. ಹಾಗಾಗಿ ಬೆಂಗಳೂರು-ಮಂಗಳೂರು ನಡುವಿನ ಸಂಚಾರಕ್ಕೆ ಆಗಾಗ ತೊಡಕಾಗುತ್ತಿತ್ತು. ಹಾಗಾಗಿ ಶಿರಾಡಿ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಕಳೆದ ವರ್ಷ ಸ್ವತಃ ಸಿಎಂ ಸಿದ್ಧರಾಮಯ್ಯ ಇಲ್ಲಿಗೆ ಭೇಟಿ ನೀಡಿ ರಸ್ತೆ ಅಗಲೀಕರಣಕ್ಕಾಗಿ ರಸ್ತೆಬದಿಯ ಗುಡ್ಡಗಳನ್ನು ಕಡಿದಾಗಿ ಕತ್ತರಿಸಿರುವುದೇ ಕಾರಣ. ಹಾಗಾಗಿ ಗುಡ್ಡಗಳನ್ನು ಇಳಿಜಾರಾಗಿ ಕತ್ತರಿಸಿ ಸರಿಪಡಿಸುವಂತೆ ಹೇಳಿದ್ದರು. ಆದರೂ ತನ್ನ ಚಾಳಿ ಬಿಡದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಗುಡ್ಡಗಳನ್ನು 90 ಡಿಗ್ರಿಯಲ್ಲಿ ಕತ್ತರಿಸುತ್ತಿರುವುದನ್ನೇ ಮುಂದುವರಿಸಿದೆ. ಇದೇ ಸಮಸ್ಯೆಯ ಮೂಲವಾಗಿದೆ.

------------------------------------------------------

ಲೀಡ್‌ ಜೊತೆ.... ಆಲೂರು ತಾಲೂಕಿನಲ್ಲೂ ಮಳೆ ಅಬ್ಬರ

ಫೋಟೋ ಶೀರ್ಷಿಕೆ

25ಎಚ್ಎಸ್ಎನ್3ಎ : ಮನೆ ಮೇಲೆ ಮರ ಬಿದ್ದಿರುವುದು.

ಕನ್ನಡಪ್ರಭ ವಾರ್ತೆ ಆಲೂರು ಕಳೆದ ಹಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆ ಗಾಳಿಗೆ ತಾಲೂಕಿನ ವಿವಿಧೆಡೆಗಳಲ್ಲಿ ಹಲವಾರು ಮರ, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು ಹಲವು ಮನೆಗಳು ಹಾನಿಗೀಡಾಗಿವೆ. ಸೋಮವಾರ ರಾತ್ರಿ ಕೆಂಚಮ್ಮನ ಹೊಸಕೋಟೆ ಹೋಬಳಿ ಶಿರಗಾವರದ ಶತಾಯುಷಿ ಮಹಿಳೆಯರೊಬ್ಬರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಹರಿಹಳ್ಳಿ,ಶಿರಗಾವರ ರಸ್ತೆಯ ಪಕ್ಕದಲ್ಲಿದ್ದ ಈ ಬೃಹತ್ ಆಕಾರದ ಮರ ಬಹಳ ವರ್ಷಗಳಷ್ಟು ಹಳೆಯದಾಗಿದ್ದು, ಲಕ್ಷ್ಮಣಗೌಡರ ಮನೆಯ ಕಡೆಗೆ ವಾಲಿ ನಿಂತಿತ್ತು. ಇದು ರಸ್ತೆ ಹಾಗೂ ಮನೆಯ ಮೇಲೆ ಬೀಳುತ್ತದೆ, ಇದನ್ನು ತೆರವು ಗೊಳಿಸುವಂತೆ ಅರಣ್ಯ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಅವರು ಬೇಜವಾಬ್ದಾರಿತನದಿಂದ ವರ್ತಿಸಿದ್ದು, ಆದುದರಿಂದಾಗಿ ಮನೆಯ ಮೇಲೆ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಜಲ್‌ ಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಅಳವಡಿಸಲು ಈ ಮರದ ಬುಡದಲ್ಲಿ ಕಾಲುವೆ ತೆಗೆದ ಪರಿಣಾಮ, ಇದರ ಬೇರುಗಳೆಲ್ಲ ತುಂಡಾಗಿ ಮರ ದುರ್ಬಲಗೊಂಡಿದ್ದು, ಮಂಗಳವಾರ ಸುರಿದ ಮಳೆಗೆ ಮುರಿದು ಬಿದ್ದಿದೆ. ಅರಣ್ಯ ಇಲಾಖೆ ಹಾಗೂ ಜಲ್ ಜೀವನ್ ಮಿಷನ್ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ಬೇಜವಾಬ್ದಾರಿತನದಿಂದಾಗಿ ಮನೆಯ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಜಲ್ ಜೀವನ್ ಮಿಷನ್ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಲಕ್ಷ್ಮಣಗೌಡರಿಗೆ ಆಗಿರುವ ನಷ್ಟವನ್ನು ಶೀಘ್ರ ಭರಿಸಬೇಕೆಂದು ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಹೇರೂರು ಜಯಣ್ಣ ಒತ್ತಾಯಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌