ಕನ್ನಡಪ್ರಭ ವಾರ್ತೆ ಮಂಡ್ಯ
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್ ಅತ್ಯಂತ ಹೀನಾಯ ಸೋಲನ್ನು ಕಂಡಿದ್ದು, ಜೆಡಿಎಸ್-ಬಿಜೆಪಿ ಮೈತ್ರಿಕೂಟ ಮುಖಭಂಗಕ್ಕೆ ಒಳಗಾಗಿದೆ. ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗದಷ್ಟು ದಯನೀಯ ಸ್ಥಿತಿಯನ್ನು ಜೆಡಿಎಸ್ ತಲುಪಿರುವುದು ಮುಖಂಡರು-ಕಾರ್ಯಕರ್ತರನ್ನು ದಿಕ್ಕೆಡಿಸುವಂತೆ ಮಾಡಿದೆ.
ಜೆಡಿಎಸ್ ಒಂದು ಸ್ಥಾನದಲ್ಲಿ ಗೆಲುವು:ಭಾನುವಾರ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಂಡ್ಯ ತಾಲೂಕು ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸತೀಶ್ ೩೨ ಮತ ಪಡೆದು ವಿಜಯಿಯಾದರೆ, ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸ್ವಾಮಿ-೧೧ ಮತ ಗಳಿಸಿ ಪರಾಭವಗೊಂಡರು, ಪಾಂಡವಪುರ ತಾಲೂಕು ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಎಚ್.ಸಿ.ಪುಟ್ಟಸ್ವಾಮಿಗೌಡ ೧೫ ಮತ ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎ.ಆರ್.ಅಶೋಕ ೭ ಮತ ಪಡೆದು ಸೋಲನುಭವಿಸಿದರು. ಕೆ.ಆರ್.ಪೇಟೆ ತಾಲೂಕು ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಎಸ್.ಅಂಬರೀಶ್ ೧೫ ಮತ ಪಡೆದು ವಿಜಯಿಯಾದರೆ, ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಿ.ಧರಣೇಶ್‌ಕುಮಾರ್ ೧೩ ಮತಗಳೊಂದಿಗೆ ಪರಾಭವಗೊಂಡರು.
ಮಳವಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಪಿ.ಎಂ.ನರೇಂದ್ರಸ್ವಾಮಿ, ನಾಗಮಂಗಲ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸಚಿನ್ ಚಲುವರಾಯಸ್ವಾಮಿ, ಮದ್ದೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಪಿ.ಸಂದರ್ಶ, ಶ್ರೀರಂಗಪಟ್ಟಣ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಬಿ.ಗಿರೀಶ, ಜಿಲ್ಲೆಯ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ವಿ.ದಿನೇಶ್, ಜಿಲ್ಲೆಯಲ್ಲಿನ ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳು ಮತ್ತು ನಗರ ಸಹಕಾರಿ ಬ್ಯಾಂಕ್ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಎಚ್.ಅಶೋಕ, ಪಾಂಡವಪುರ ಉಪ ಇಭಾಗದ ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೇತ್ರದಿಂದ ಎ.ವಿಜೇಂದ್ರಮೂರ್ತಿ, ಜಿಲ್ಲೆಯಲ್ಲಿನ ಕೈಗಾರಿಕಾ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಸಿ.ಜೋಗಿಗೌಡ ಹಾಗೂ ಮಂಡ್ಯ ಉಪವಿಭಾಗ ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೇತ್ರದಿಂದ ಸಿ.ಚಲುವರಾಜು ಅವಿರೋಧ ಆಯ್ಕೆಯಾಗಿದ್ದರು.ಸಚಿನ್ ಚಲುವರಾಯಸ್ವಾಮಿಗೆ ಅಧ್ಯಕ್ಷ ಪಟ್ಟ?
ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೃಪಾಶೀರ್ವಾದದಿಂದ ಸಚಿನ್ ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗುವ ಮೂಲಕ ರಾಜಕೀಯ ಪ್ರವೇಶ ಪಡೆದರು. ಆ ನಂತರ ಅಧ್ಯಕ್ಷರಾದರು. ಇದೀಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆಯ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಜಿಲ್ಲೆಯ ೧೨ ಮಂದಿಯನ್ನು ವಿವಿಧ ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಮಾನ ದೊರಕಿಸಿಕೊಟ್ಟು ಎರಡನೇ ಹಂತದ ನಾಯಕರ ಬೆಳವಣಿಗೆಗೆ ಕಾರಣರಾಗಿರುವ ಎನ್.ಚಲುವರಾಯಸ್ವಾಮಿ ತೀರ್ಮಾನಕ್ಕೆ ಯಾರಿಂದಲೂ ವಿರೋಧಗಳು ವ್ಯಕ್ತವಾಗುತ್ತಿಲ್ಲ. ಹಾಗಾಗಿ ಪುತ್ರನನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಎಲ್ಲರೂ ಸಮ್ಮತಿ ಸೂಚಿಸುವ ಸಂಭವ ಹೆಚ್ಚಾಗಿದೆ.