ದೇಶದ್ರೋಹಿ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ: ನಿಂಗರಾಜ್‌ಗೌಡ

KannadaprabhaNewsNetwork |  
Published : Nov 03, 2025, 01:30 AM IST
ಡಾ.ಈ.ಸಿ.ನಿಂಗರಾಜ್‌ಗೌಡ | Kannada Prabha

ಸಾರಾಂಶ

ಪಿಎಫ್‌ಐ ಮತ್ತು ಎಸ್‌ಡಿಪಿಐ ದೇಶದ್ರೋಹಿ ಸಂಘಟನೆಗಳೆಂದು ಗೊತ್ತಿದ್ದರೂ ಕಾಂಗ್ರೆಸ್ ಸರ್ಕಾರ ಅವುಗಳನ್ನು ನಿಷೇಧಿಸುವ ಧೈರ್ಯ ಪ್ರದರ್ಶಿಸದೆ ದೇಶಪ್ರೇಮಿ ಸಂಘಟನೆಯಾದ ಆರ್‌ಎಸ್‌ಎಸ್‌ನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪಿಎಫ್‌ಐ ಮತ್ತು ಎಸ್‌ಡಿಪಿಐ ದೇಶದ್ರೋಹಿ ಸಂಘಟನೆಗಳೆಂದು ಗೊತ್ತಿದ್ದರೂ ಕಾಂಗ್ರೆಸ್ ಸರ್ಕಾರ ಅವುಗಳನ್ನು ನಿಷೇಧಿಸುವ ಧೈರ್ಯ ಪ್ರದರ್ಶಿಸದೆ ದೇಶಪ್ರೇಮಿ ಸಂಘಟನೆಯಾದ ಆರ್‌ಎಸ್‌ಎಸ್‌ನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿದೆ ಎಂದು ಬಿಜೆಪಿ ಮುಖಂಡ ಡಾ.ಈ.ಸಿ.ನಿಂಗರಾಜ್‌ಗೌಡ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೂರು ವರ್ಷಗಳಿಂದ ದೇಶದ ಭದ್ರತೆಗಾಗಿ ಆರ್‌ಎಸ್‌ಎಸ್ ಸಂಸ್ಥೆ ಕೆಲಸ ಮಾಡುತ್ತಿದೆ. ಇಡೀ ಸಮಾಜ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಒಪ್ಪಿಕೊಂಡಿದೆ. ರಾಜಕೀಯ ಕಾರಣಕ್ಕೆ ಆರ್‌ಎಸ್‌ಎಸ್‌ನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ ಖರ್ಗೆ ವಿರೋಧ ಮಾಡುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್ ಸರ್ಕಾರ ತಪ್ಪುತಿಳುವಳಿಕೆಯಿಂದ ವಿರೋಧ ಮಾಡುತ್ತಿದೆ ಎಂದು ದೂಷಿಸಿದರು.

ಹಿಂದೆ ಜವಹರಲಾಲ್ ನೆಹರು, ಇಂದಿರಾಗಾಂಧಿ ಅವರು ಕೂಡ ಕ್ಷುಲ್ಲಕ ಕಾರಣಕ್ಕೆ ಆರ್‌ಎಸ್‌ಎಸ್‌ನ್ನು ನಿಷೇಧ ಮಾಡಿದ್ದರು. ಆಗ ಅವರಿಗೆ ಕೋರ್ಟ್ ಛೀಮಾರಿ ಹಾಕಿತ್ತು. ಇದೀಗ ಹಳೇ ದಾರಿಯನ್ನೇ ಕಾಂಗ್ರೆಸ್ ಮತ್ತೆ ಅನುಸರಿಸುತ್ತಿದೆ. ರಾಜಕೀಯ ಕಾರಣಕ್ಕೆ ಮತ್ತೆ ಆರ್‌ಎಸ್‌ಎಸ್ ವಿಚಾರ ತೆಗೆದಿರುವುದು ತಪ್ಪು ಎಂದರು.

ಪಿಎಫ್‌ಐ, ಎಸ್‌ಡಿಪಿಐನಂತಹ ದೇಶದ್ರೋಹಿ ಸಂಘಟನೆಗಳು ಹಾಗೂ ನಕ್ಸಲ್ ಚಟುವಟಿಕೆಗಳನ್ನು ಕಾಂಗ್ರೆಸ್ ಸರ್ಕಾರ ಬೆಂಬಲಿಸುತ್ತದೆ. ದೇಶಭಕ್ತರನ್ನು ಸೃಷ್ಟಿ ಮಾಡುವ ಆರ್‌ಎಸ್‌ಎಸ್ ಸಂಘಟನೆಯನ್ನು ವಿರೋಧಿಸುವುದು ತಪ್ಪು. ಆರ್‌ಎಸ್‌ಎಸ್ ವಿರೋಧ ಅಥವಾ ನಿಷೇಧಿಸುವುದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ. ಸಮಾಜ ಆರ್‌ಎಸ್‌ಎಸ್ ಪರವಾಗಿದೆ. ಭಾರತ ಇರುವವರೆಗೂ ಆರ್‌ಎಸ್‌ಎಸ್ ಹೆಚ್ಚು ಬೆಳವಣಿಗೆ ಕಾಣಲಿದೆ ಎಂದು ಖಚಿತವಾಗಿ ನುಡಿದರು.

ಎಂಇಎಸ್ ಸಂಘಟನೆ ನಿಷೇದಕ್ಕೆ ಕದಂಬ ಸೈನ್ಯ ಆಗ್ರಹ

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ವೇಳೆ ಹಿಂಸಾಚಾರ ನಡೆಸಿರುವ ಎಂಇಎಸ್ ಸಂಘಟನೆಯನ್ನು ನಾಡದ್ರೋಹಿ ಸಂಘಟನೆ ಎಂದು ಘೋಷಿಸಿ ನಿಷೇಧಿಸುವಂತೆ ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಮೆರವಣಿಗೆ ತೆರಳುವ ವೇಳೆ ಕನ್ನಡ ವಿರೋಧಿಗಳಾದ ಎಂಇಎಸ್ ಸಂಘಟನೆಯವರು ಏಕಾಏಕಿ ನುಗ್ಗಿ ಹಲವರಿಗೆ ಚಾಕುವಿನಿಂದ ಇರಿದು ಹಲ್ಲೆ, ದೌರ್ಜನ್ಯ, ಪುಂಡಾಟಿಕೆ ನಡೆಸಿದ್ದಾರೆ. ಎಂಇಎಸ್ ಪುಂಡರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸುವಂತೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಎಂಇಎಸ್ ಮರಾಠ ಸಂಘಟನೆಗಳಿಗೆ ಕನ್ನಡ ರಾಜ್ಯೋತ್ಸವ ಆಚರಣೆ ವಿರೋಧಿಸಿ ಕರಾಳ ದಿನ ಆಚರಣೆ ಮಾಡಲು ಅವಕಾಶ ಕೊಟ್ಟಿದ್ದೇ ಅಕ್ಷಮ್ಯ ಅಪರಾಧ. ರಾಜ್ಯ ಸರ್ಕಾರ ಇಂತಹ ದುಷ್ಕೃತ್ಯಗಳಿಗೆ ಅವಕಾಶ ಮಾಡಿಕೊಡಬಾರದು. ಪುಂಡಾಟಿಕೆ, ಹಿಂಸಾಚಾರ ನಡೆಸಿದವರ ವಿರುದ್ಧ ಉಗ್ರ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ದೇಶದ್ರೋಹ ಕಾನೂನನ್ನು ಜಾರಿಗೆ ತಂದಿರುವಂತೆ ನಾಡದ್ರೋಹಿ ಕಾನೂನನ್ನು ಜಾರಿಗೆ ತರುವಂತೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

PREV

Recommended Stories

ಪೌರ ಕಾರ್ಮಿಕನಾಗಿ ಪೊರಕೆ ಹಿಡಿದು ರಸ್ತೆ ಗುಡಿಸಿದ ಅಮೆರಿಕ ಪ್ರಜೆ!
ಸಂಪುಟ ಪುನಾರಚನೆಗಾಗಿ ನ.15ರಂದು ದೆಹಲಿಗೆ : ಸಿಎಂ ಸಿದ್ದರಾಮಯ್ಯ