ಶಿಕಾರಿಪುರ: ಬಸ್ ನಿಲ್ದಾಣ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ಎಲೆ ಅಡಕೆ ಜಗಿದು ಉಗುಳಿ ಜನತೆಯ ಆನಾರೋಗ್ಯಕ್ಕೆ ಕಾರಣವಾಗದಂತೆ ಮೂಡಿಸುತ್ತಿರುವ ಜಾಗೃತಿಗೆ ನಿತ್ಯ ಪ್ರೋತ್ಸಾಹ, ಬೆಂಬಲ ವ್ಯಕ್ತವಾಗುತ್ತಿದ್ದು, ಈ ಕಾರ್ಯದಲ್ಲಿ ವಿವಿಧ ಬಗೆಯ ಅವಮಾನಗಳ ನಡುವೆ ಸನ್ಮಾನ ಸಮಾಜಮುಖಿ ಕಾರ್ಯಕ್ಕೆ ಹೆಚ್ಚಿನ ಸ್ಫೂರ್ತಿ ಹಾಗೂ ಬಲ ತಂದಿದೆ ಎಂದು ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ದುರ್ಗಪ್ಪ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಶನಿವಾರ ಬಸ್ ನಿರ್ವಾಹಕರು ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಜನತೆ ಬೇಕಾಬಿಟ್ಟಿಯಾಗಿ ಗುಟ್ಕಾ, ತಂಬಾಕು ಪದಾರ್ಥ ಜಗಿದು ಉಗುಳುವುದನ್ನು ಕಂಡು ತೀವ್ರ ಬೇಸರಗೊಂಡಿದ್ದು, ನಿವೃತ್ತಿಗೆ ಮುನ್ನಾ ಈ ಬಗ್ಗೆ ಜಾಗೃತಿಗಾಗಿ ಪ್ರಯತ್ನಿಸಿದ್ದಾಗಿ ತಿಳಿಸಿದರು.ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಉಗುಳಬಾರದು ಎಂದು ಅರಿವು ಮೂಡಿಸುತ್ತಿರುವಾಗ ಅನೇಕರ ಜೊತೆ ಜಗಳವಾಡಿ ಅವಮಾನ ಉಂಟಾದಾಗ ಇಲ್ಲಿನ ಬಸ್ ಚಾಲಕರು, ನಿರ್ವಾಹಕರು, ಅಂಗಡಿ, ಹೋಟೆಲ್ ಮಾಲೀಕರು ಎಲ್ಲರೂ ಜತೆಗೂಡಿ ಶ್ಲಾಘಿಸಿ ಸಹಕಾರ ನೀಡಿದ್ದು ಇದರಿಂದಾಗಿ ಶೇ.30 ರಷ್ಟು ಕಡಿಮೆಯಾಗಿರುವುದರ ಜತೆಗೆ ಸ್ವಚ್ಛತೆ ಕಂಡುಬರುತ್ತಿದೆ. ಈ ಸನ್ಮಾನ ಅನಾರೋಗ್ಯದ ನಿಶ್ಯಕ್ತ ವ್ಯಕ್ತಿಗೆ ಟಾನಿಕ್ ಮೂಲಕ ಪ್ರೋತ್ಸಾಹ ನೀಡಿದಂತಾಗಿದೆ ಎಂದರು.ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಪ್ರಕಾಶ ಜೇನಿ, ಎಲ್ಲೋಜಿ ರಾವ್, ಸುಧೀರ್, ಮಂಜಪ್ಪ, ಲೋಕೇಶ, ಪರಸಪ್ಪ, ಪರಮೇಶಿ, ಪಾಲಾಕ್ಷಪ್ಪ, ಪಾಪಣ್ಣ, ಗಾಮದ ಶಾಂತಪ್ಪ, ಅಣ್ಣಪ್ಪ, ಪುಟ್ಟಪ್ಪ, ಕೃಷ್ಣಪ್ಪ, ಕೃಷ್ಣಮೂರ್ತಿ, ಸಿದ್ದಪ್ಪ, ಸುರೇಶ, ರೇಣುಕ ಸ್ವಾಮಿ, ಸತೀಶ ರಾಟೇರ, ಮಂಜು ಎರೆಕಟ್ಟೆ, ಪ್ರಶಾಂತ್ ಕ್ಯಾಟ್ ಸಹಿತ ಹಲವರು ಹಾಜರಿದ್ದರು.