ಕನ್ನಡಪ್ರಭ ವಾರ್ತೆ ಶಿರಾ
ಶಿರಾ ತಾಲೂಕಿನ ಕಸಬಾ ಹೋಬಳಿಯ ಮೇಲ್ಕುಂಟೆ ಗ್ರಾಮದ ಹುಚ್ಚಗೀರನಹಳ್ಳಿ ಗೇಟ್ ಬಳಿ ಶೇಂಗಾ ಬೆಳೆಯನ್ನು ಸಚಿವರು ಕ್ಷೇತ್ರ ಭೇಟಿ ನೀಡಿ ವೀಕ್ಷಿಸಿದರು. ತರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಗೆಲಿಂಗನಹಳ್ಳಿ ಮತ್ತು ಮೇಲ್ಕುಂಟೆ ಗ್ರಾಮ ಪಂಚಾಯಿತಿಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯಿಂದ ಬೆಳೆಗಳಿಗೆ ಉಂಟಾಗಿರುವ ಹಾನಿ, ಬೆಳೆಗಳ ಪ್ರಸ್ತುತ ಸ್ಥಿತಿಗತಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪರಿಶೀಲಿಸಿ, ಸರ್ಕಾರದ ಪರಿಹಾರ ಹಾಗೂ ಸೌಲಭ್ಯಗಳು ಅರ್ಹ ರೈತರಿಗೆ ತ್ವರಿತವಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬರದಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ಸರ್ಕಾರದ ನಿಯಮಾನುಸಾರ ಅಗತ್ಯ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬರ ನಿರ್ವಹಣೆಗೆ ವಿಬಿ ರಾಮ್ ಜಿ ಅನುಷ್ಠಾನ ಕುರಿತು ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಅವರು, ತಡಕಲೂರು ಗ್ರಾ.ಪಂ ವ್ಯಾಪ್ತಿಯ ತಿಮ್ಮನಹಳ್ಳಿ ಗೋಕಟ್ಟೆ ಸಮಗ್ರ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ರೈತರಿಗೆ ವೈಯಕ್ತಿಕ ಕಾಮಗಾರಿಗಳ ಕಾಮಗಾರಿ ಆದೇಶ ಪತ್ರಗಳನ್ನು ವಿತರಿಸಿದರು, ಹಾಗೂ ವಿಬಿ ರಾಮ್ ಜಿ ಯೋಜನೆಯ ಹೊಸ ನಮೂನೆಯ ಜಾಬ್ ಕಾರ್ಡ್‌ಗಳನ್ನು ಸಾಂಕೇತಿಕವಾಗಿ ಕೂಲಿಕಾರರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಪಂ ಸಿಇಒ ಅಶ್ವಿಜ, ತಹಶೀಲ್ದಾರ್ ಆನಂದ್ ಕುಮಾರ್, ಹಾರೋಗೆರೆ ಮಹೇಶ್, ಮಂಜು ಪ್ರಸಾದ್, ಹರೀಶ್. ನಾಗರಾಜು, ರಮೇಶ್ ಸೇರಿದಂತೆ ಇತರರಿದ್ದರು.