ಚನ್ನಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಭೂಮಿಪೂಜೆ

KannadaprabhaNewsNetwork | Published : Sep 22, 2024 1:51 AM

ಸಾರಾಂಶ

ಚನ್ನಪಟ್ಟಣ ನಗರದಲ್ಲಿ ಶನಿವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವರು ಇದ್ದರು.

-ಶಂಕುಸ್ಥಾಪನೆ -ಅಮೃತ್ ಯೋಜನೆ -೨ರ ಅಡಿ ಹಾಲಿ ಇರುವ ನಗರ ನೀರು ಸರಬರಾಜು ಯೋಜನೆ ಮೇಲ್ದರ್ಜೆಗೇರಿಸುವ ಯೋಜನೆ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ನಗರದಲ್ಲಿ ಶನಿವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ, ಹಲವರು ಸಚಿವರು, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಗರದ ತಟ್ಟೆಕೆರೆಯ ಕುಡಿಯುವ ನೀರಿನ ಕಟ್ಟೆ ಬಳಿ ಸುಮಾರು ೯ ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಗುದ್ದಲಿಪೂಜೆ, ವಸತಿ ರಹಿತರಿಗೆ ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ಮಂಜೂರಾತಿ ಪತ್ರ ವಿತರಣೆ. ಲೋಕೋಪಯೋಗಿ ಇಲಾಖೆಯಿಂದ ಪೆಟ್ಟಾ ಶಾಲೆಯ ಬಳಿ ೫ ಕೋಟಿ ವೆಚ್ಚದಲ್ಲಿ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿ ಹಾಗೂ ಮದೀನಾ ಚೌಕ್ ನಲ್ಲಿ ಅಲ್ಪಸಂಖ್ಯಾತರ ೧೪ ವಾರ್ಡ್ ಗಳಲ್ಲಿ ರಸ್ತೆಯ ಅಭಿವೃದ್ಧಿಗೆ ಸುಮಾರು ೧೬ ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ನಂತರ ಟಿಪ್ಪು ಸುಲ್ತಾನ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ೨೧ ಅಂಗವಿಕಲ ಫಲಾನುಭವಿಗಳಿಗೆ ಅಲ್ಪಸಂಖ್ಯಾತ ಅಭಿವೃದ್ದಿ ಇಲಾಖೆಯಿಂದ ಹೊಲಿಗೆ ಯಂತ್ರ, ಇತರೆ ಸೌಲಭ್ಯಗಳ ಹಾಗೂ ಸಾರಥಿ ಯೋಜನೆಯಲ್ಲಿ ೨೫ ಫಲಾನುಭವಿಗಳಿಗೆ ಆಟೋ ಮತ್ತು ಕಾರು ಖರೀದಿಸಲು ಸಹಾಯಧನ ಮಂಜೂರಾತಿ ಪತ್ರ ಹಂಚಿಕೆ ಮಾಡಲಾಯಿತು.

ಮಂಗಳವಾರಪೇಟೆಯಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ವಾರ್ಡ್‌ಗೆ ತಲಾ ೧ ಕೋಟಿಯಂತೆ ೩೧ ವಾರ್ಡ್‌ಗಳಲ್ಲಿ ೩೧ ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಅಂಬೇಡ್ಕರ್ ನಗರದಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ಪಟ್ಟಣದ ೧೪ ವಾರ್ಡ್‌ಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿ, ೧೦ ಕೋಟಿ ವೆಚ್ಚದಲ್ಲಿ ನಗರಸಭೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ, ನಗರಸಭಾ ವ್ಯಾಪ್ತಿಯ ಶೆಟ್ಟಿಹಳ್ಳಿಯ ೭ನೇ ವಾರ್ಡ್, ಚರ್ಚ್ ರೋಡಿನಲ್ಲಿ ಕೇಂದ್ರ ಪುರಸ್ಕೃತ ಅಮೃತ್ ಯೋಜನೆ -೨ರ ಅಡಿ ಹಾಲಿ ಇರುವ ನಗರ ನೀರು ಸರಬರಾಜು ಯೋಜನೆಯನ್ನು ೩೫ ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

Share this article