ಕಾಂಗ್ರೆಸ್ ಭವನ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್

KannadaprabhaNewsNetwork | Published : Jul 1, 2025 12:47 AM

ಶಾಸಕರ ಜೊತೆ ಸುರ್ಜೇವಾಲ ಸಭೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರ ಡ್ಯೂಟಿ ಅವರು ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು, ಎಂಎಲ್ಎಗಳಿಗೆ ಕಾರ್ಯಕ್ರಮ ಕೊಡುತ್ತಿದ್ದಾರೆ. ನಾನು ಹೋಗುತ್ತೇನೆ, ನಾನಿಲ್ಲದೇ ಹೇಗೆ ಆಗುತ್ತೆ. ನಮ್ಮಲ್ಲಿ ಯಾವ ಅಸಮಾಧಾನವೂ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ವೀಕ್ಷಣೆ ಮಾಡಿದರು.

ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟೆ ಸಾಗರದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ಬಳಿಕ ಡಿ.ಕೆ.ಶಿವಕುಮಾರ್ ರಾಮನಗರಕ್ಕೆ ಆಗಮಿಸಿ ಕಾಂಗ್ರೆಸ್ ಕಚೇರಿಯ ಜಾಗ ನೋಂದಣಿ ವಿಚಾರವಾಗಿ ರಾಮನಗರದ ಉಪನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದರು. ಬಿಡದಿ ಭಾಗದಲ್ಲಿ ಖರೀದಿ ಮಾಡಿದ್ದ ಜಮೀನನ್ನು ಡಿ.ಕೆ.ಶಿವಕುಮಾರ್ ತಮ್ಮ ಪತ್ನಿ ಉಷಾ ಅವರ ಹೆಸರಿಗೆ ದಾನಪತ್ರ ನೋಂದಣಿ ಮಾಡಿಸಿದರು.

ಆನಂತರ ಕಾಂಗ್ರೆಸ್ ಭವನ ನಿರ್ಮಾಣ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ವೈಯಕ್ತಿಕ ಕೆಲಸ ಹಾಗೂ ಕಾಂಗ್ರೆಸ್ ಕಚೇರಿಯ ಜಾಗ ನೋಂದಣಿ ಅಗಬೇಕಿತ್ತು. ಅದರ ಕೆಲ ಸಮಸ್ಯೆ ಇದ್ದ ಕಾರಣ ಉಪನೋಂದಣಾಧಿಕಾರಿ ಕಚೇರಿಗೆ ಬಂದಿದ್ದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಆಗುತ್ತಿದೆ. ಸದ್ಯ ಅದರ ಜಾಗ ನನ್ನ ಹೆಸರಿಗಿದೆ. ಅದನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಚೇರಿಗೆ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿದರು.

ಶಾಸಕರ ಜೊತೆ ಸುರ್ಜೇವಾಲ ಸಭೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರ ಡ್ಯೂಟಿ ಅವರು ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು, ಎಂಎಲ್ಎಗಳಿಗೆ ಕಾರ್ಯಕ್ರಮ ಕೊಡುತ್ತಿದ್ದಾರೆ. ನಾನು ಹೋಗುತ್ತೇನೆ, ನಾನಿಲ್ಲದೇ ಹೇಗೆ ಆಗುತ್ತೆ. ನಮ್ಮಲ್ಲಿ ಯಾವ ಅಸಮಾಧಾನವೂ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಈ ವೇಳೆ ಶಾಸಕರಾದ ಇಕ್ಬಾಲ್ ಹುಸೇನ್, ಕದ್ಲೂರು ಉದಯ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್ ಮತ್ತಿತರರು ಹಾಜರಿದ್ದರು.