ರಾಣಿಬೆನ್ನೂರು: ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ಮುಳುಗಿ, ದಕ್ಷ ಆಡಳಿತ ನಡೆಸುವಲ್ಲಿ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟಿಸಿ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಸ್ವಜನ ಪಕ್ಷಪಾತ ಮಿತಿ ಮೀರಿದೆ. ಸಚಿವರ ವಿರುದ್ಧವೇ ಸ್ವಪಕ್ಷೀಯ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬಡವರಿಗೆ ಯಾವುದೇ ಯೋಜನೆಗಳ ಅನುಷ್ಠಾನ ಮಾಡದೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿಗೆ ಯಾವುದೇ ಅನುದಾನ ಸಿಗುತ್ತಿಲ್ಲ.
ಶಿಗ್ಗಾಂವಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಲಂಚಗುಳಿತನ, ಭ್ರಷ್ಟಾಚಾರ ಹೆಚ್ಚಾಗಿದ್ದು, ಉತ್ತಮ ಮತ್ತು ಕ್ರಿಯಾಶೀಲ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಈರಣ್ಣ ನವಲಗುಂದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಲಂಚಗುಳಿತನ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ತುಂಬಿ ತುಳುಕುತ್ತಿದೆ. ಸರ್ಕಾರದ ಆಡಳಿತ ವೈಫಲ್ಯ ಮತ್ತು ನಿಷ್ಕ್ರಿಯತೆಯ ಬಗ್ಗೆ, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೇ ಬಹಿರಂಗವಾಗಿ ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂಬಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕರು ಮತ್ತು ಮುಖಂಡರು ರಾಜ್ಯ ಸರ್ಕಾರದ ಮತ್ತು ಸಚಿವರ ವಿರುದ್ಧ ಬಹಿರಂಗವಾಗಿ ಸಾಕ್ಷಿ ಸಮೇತ ದಾಖಲೆಗಳೊಂದಿಗೆ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಇದುವರೆಗೂ ರಾಜ್ಯದ ಜನತೆಗೆ ಮೂಲ ಸೌಕರ್ಯಗಳಾದ ರಸ್ತೆ, ಸೇತುವೆ, ಕೆರೆ- ಕಟ್ಟೆಗಳ ಪುನಶ್ಚೇತನ, ಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮುಂತಾದವುಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.ಕಾರ್ಯಕರ್ತರಾದ ಬಿ.ಸಿ. ಗುದ್ಲಿಶೆಟ್ಟರ್, ಜಗದೀಶ ಲಂಡೆತ್ತಿನವರ, ಗದಿಗೆಪ್ಪ ವಾಲಿಕಾರ, ಖಾದರಸಾಬ್ ಪಠಾಣ್, ಚಂದ್ರಗೌಡ ಪಾಟೀಲ, ಪಕ್ಕೀರಪ್ಪ ಇತರರು ಇದ್ದರು.