ಕನ್ನಡಪ್ರಭ ವಾರ್ತೆ ಮಂಡ್ಯ
ನದಿಗೆ ತ್ಯಾಜ್ಯ ನೀರು ಸೇರ್ಪಡೆಯಾಗಿ ಕಲುಷಿತಗೊಳ್ಳುತ್ತಿದ್ದು ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳಬೇಕೆಂಬ ಶಾಸಕ ದಿನೇಶ್ ಗೂಳಿಗೌಡ ಅವರ ಮನವಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ನದಿ ನೀರು ಮಲೀನಗೊಳ್ಳದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಲಿಖಿತವಾಗಿ ಆದೇಶಿಸಿದ್ದಾರೆ.ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಸಮಿತಿ ರಚಿಸಿ ಎರಡು ವಾರದಲ್ಲಿ ವಿಸ್ತಾರವಾದ ವರದಿ ಸಲ್ಲಿಸಲು ಕ್ರಮಕೈಗೊಳ್ಳುವಂತೆ ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.
ಡಿಸಿಎಂ ಮತ್ತು ಕೈಗಾರಿಕಾ ಸಚಿವರ ಆದೇಶದ ಕುರಿತಂತೆ ಪ್ರತಿಕ್ರಿಯಿಸಿರುವ ಕಾವೇರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಈ ಕುರಿತು ಪರಿಶೀಲಿಸಿ, ಚರ್ಚಿಸಿ ಕಡತ ಮಂಡಿಸುವುದಾಗಿ ತಿಳಿಸಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನದಿಗಳ ಮಾಲಿನ್ಯದ ಬಗ್ಗೆ ೨೦೨೩ರಲ್ಲಿ ವರದಿ ನೀಡಿದ್ದು, ಅದರಲ್ಲಿ ಕಾವೇರಿ ನದಿಯ ನೀರೂ ಕಲುಷಿತವಾಗಿರುವ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಕಾವೇರಿ ಕರ್ನಾಟಕದ ಜೀವ ನದಿಯಾಗಿದೆ. ಕುಡಿಯುವ ನೀರು ಪೂರೈಸುವುದು ಮಾತ್ರವಲ್ಲದೇ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹಸನು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚಿಸಬೇಕು ಎಂದು ದಿನೇಶ್ ಗೂಳಿಗೌಡ ಸರ್ಕಾರವನ್ನು ಒತ್ತಾಯಿಸಿದ್ದರು.
ಕಾವೇರಿ ನದಿಯಿಂದ ಬೆಂಗಳೂರು ನಗರದ ಕುಡಿಯುವ ನೀರು ಪೂರೈಕೆಗಾಗಿ ೧೯ ಟಿಎಂಸಿ ನೀರನ್ನು ಬಳಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಪ್ರಸ್ತುತ ಬೆಂಗಳೂರು ಜಲಮಂಡಳಿಯು ಕಾವೇರಿ ನೀರು ಸರಬರಾಜು ಯೋಜನೆಯ ಮೂಲಕ ೧೪೪೦ ಎಂಎಲ್‌ಡಿಯಷ್ಟು ನೀರನ್ನು ನಗರಕ್ಕೆ ಪೂರೈಸುತ್ತಿದೆ.
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಉಗಮಿಸುವ ಕಾವೇರಿ ಹರಿಯುವ ಮಾರ್ಗದ ಕುಶಾಲನಗರ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ನಂಜನಗೂಡು, ಟಿ.ನರಸೀಪುರ, ಕೊಳ್ಳೇಗಾಲ ಮುಂತಾದ ಪ್ರಮುಖ ನಗರ-ಪಟ್ಟಣಗಳ ಭಾಗದಲ್ಲಿ ಹಲವು ಕಾರ್ಖಾನೆಗಳು ತಲೆ ಎತ್ತಿದ್ದು ಅದರ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೆ ನೇರವಾಗಿ ನದಿಗೆ ಹರಿಯ ಬೀಡುತ್ತಿರುವುದರಿಂದ ನದಿಯ ನೀರು ಸಂಪೂರ್ಣ ಕಲುಷಿತಗೊಂಡು ಮಲಿನಗೊಳ್ಳುತ್ತಿದೆ. ಕೈಗಾರಿಕಾ ಪ್ರದೇಶದಿಂದ ಶುದ್ದೀಕರಿಸದ ತ್ಯಾಜ್ಯ ನೀರು ನದಿ ಸೇರುತ್ತಿದ್ದು ಕೆಮಿಕಲ್ ಮಿಶ್ರಿತ ನೀರಿನಿಂದ ನೊರೆ ಸೃಷ್ಟಿಯಾಗಿ, ಜಲಚರಗಳಿಗೆ ಮಾರಣಾಂತಿಕವಾಗುತ್ತಿದೆ ಎಂದೂ ಹೇಳಿದ್ದರು.
ಸಿಪಿಸಿಬಿ ವರದಿ ಪ್ರಕಾರ, ಶುದ್ಧ ನೀರಿನಲ್ಲಿ ಪ್ರತಿ ಲೀಟರ್ ನೀರಿನಲ್ಲಿ ೧ ಎಂಜಿಗಿಂತ ಕಡಿಮೆ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಪ್ರಮಾಣ ಇರಬೇಕು. ಆದರೆ, ಕಾವೇರಿ ನದಿಯಲ್ಲಿ ೬ ಎಂಜಿಯಷ್ಟಿದೆ ಎಂಬುದನ್ನು ತಿಳಿಸಿದ್ದು, ಇದು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ.
ಕೈಗಾರಿಕೆ ತ್ಯಾಜ್ಯ, ಘನ ತ್ಯಾಜ್ಯ ಅಪಾಯದ ಪ್ರಮಾಣ ಮೀರಿ ನದಿ ನೀರಿಗೆ ಸೇರ್ಪಡೆಯಾಗುತ್ತಿರುವುದರಿಂದ ಇದರ ತಡೆಗೆ ಸರ್ಕಾರ ಕ್ರಮವಹಿಸಬೇಕಿದೆ. ಇದಕ್ಕಾಗಿಯೇ ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚನೆ ಮಾಡುವುದರಿಂದ ಕೈಗಾರಿಕಾ ಪ್ರದೇಶ, ಯುಜಿಡಿ ಮಿಕ್ಸಿಂಗ್ ಲಿಂಕ್, ಹೋಟೆಲ್ ಹಾಗೂ ರೆಸಾರ್ಟ್ ಇತರ ಪ್ರದೇಶಗಳಿಂದ ಬರುವ ಮಲಿನ ನೀರು ಪವಿತ್ರ ಕಾವೇರಿ ನದಿ ಒಡಲು ಸೇರದಂತೆ ನಿಗಾವಹಿಸಬಹುದು ಎಂದ್ದರು.
ಇದರಿಂದ ಸರ್ಕಾರ ಬೆಂಗಳೂರಿನ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಲಿದೆ. ನದಿ ನೀರು ಸ್ವಚ್ಛವಾಗಿ ಜಲಚರಗಳು, ನದಿ ನೀರು ಅವಲಂಬಿತ ಪ್ರದೇಶಗಳ ಜನರ ಆರೋಗ್ಯ ಕೂಡ ಸುಧಾರಿಸಲಿದೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು.