ಬೀರಲಿಂಗೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಕನ್ನಡಪ್ರಭ ವಾರ್ತೆ ಕಾರಟಗಿಸಿಎಂ ಸಿದ್ದರಾಮಯ್ಯನವರ ಆಶೀರ್ವಾದವೇ ನಾನು ರಾಜ್ಯದಲ್ಲಿ ಎರಡು ಬಾರಿ ಸಚಿವನಾಗಲು ಮುಖ್ಯಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಬರಗೂರು ಗ್ರಾಮದಲ್ಲಿ ₹೧.೫೦ ಕೋಟಿ ಮೊತ್ತದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಸೋಮವಾರ ಸಂಜೆ ಮಾತನಾಡಿದರು.ಹಾಲುಮತ ಸಮಾಜದವರಿಗೆ ಕುಲಗುರು ಶ್ರೀ ಬೀರಲಿಂಗೇಶ್ವರನ ಆಶೀರ್ವಾದ ಇದ್ದರೆ, ರಾಜ್ಯದಲ್ಲಿ ನನಗೆ ನಮ್ಮ ಸಿಎಂ ಬೀರೇಶ್ವರನ (ಸಿದ್ದರಾಮಯ್ಯ) ಆಶೀರ್ವಾದವಿದೆ. ರಾಜ್ಯದಲ್ಲಿ ೬ ಬಾರಿ ಶಾಸಕರಾಗಿ ಆಯ್ಕೆಯಾದವರೂ ಇದ್ದಾರೆ. ಆದರೆ, ಮಂತ್ರಿ ಆಗುವುದು ಅಷ್ಟು ಸುಲಭವಲ್ಲ. ಕಳೆದ ೨೦೦೮ ರಲ್ಲಿ ನಮ್ಮಿಂದಲೇ ರಾಜ್ಯದಲ್ಲಿ ಸರ್ಕಾರ ರಚನೆಯಾಯಿತು ನಾನು ಸಹಜವಾಗಿಯೇ ಮಂತ್ರಿಯಾದೆ. ಆದರೆ, ೨೦೧೩ ಮತ್ತು ೨೦೨೪ರಲ್ಲಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದದಿಂದ ನಾನು ಸಚಿವನಾಗಿದ್ದು ಎಂದು ಪುನರ್‌ರುಚ್ಚರಿಸಿದರು.
ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇವೆ ಎಂಬುದು ಮುಖ್ಯವಲ್ಲ. ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ನಾವೇನು ಅಭಿವೃದ್ಧಿ ಕಾರ್ಯ ಮಾಡುತ್ತೇವೆ, ಅದು ಶಾಶ್ವತವಾಗಿ ಉಳಿಯುತ್ತದೆ. ೨೦೦೮ರಲ್ಲಿ ಗೆದ್ದಾಗ ರೈಸ್ ಟೆಕ್ನಾಲಜಿ ಪಾರ್ಕ್, ೨೦೧೩ರಲ್ಲಿ ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿದೆ. ಈಗ ೨೦೨೪ರಲ್ಲಿ ಮತ್ತೊಮ್ಮೆ ಮಂತ್ರಿಯಾಗಿದ್ದೇನೆ. ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯ ಮಾಡುತ್ತೇನೆ ಎಂದರು.ಒಟ್ಟು ನಾಲ್ಕು ಬಾರಿ ಚುನಾವಣೆ ಸ್ಪರ್ಧೆ ಮಾಡಿರುವೆ. ಎಲ್ಲ ಸಂದರ್ಭದಲ್ಲಿ ಎಲ್ಲ ಸಮಾಜಗಳು ನನ್ನ ಜತೆಗೆ ಗಟ್ಟಿಯಾಗಿ ನಿಂತಿವೆ. ನಾನು ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣೆಗೆ ಬಂದಾಗ ಚುನಾವಣೆಯಲ್ಲಿ ಗೆದ್ದರೆ ₹೧ ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದೆ. ಆದರೆ, ಕೆಲವರು ತಂಗಡಗಿ ಹೇಗೆ ಗೆಲ್ಲುತ್ತಾನೆ ಎಂದು ಅಪಹಾಸ್ಯ ಮಾಡಿದ್ದರು. ನಾನು ಬೀರೇಶ್ವರನ ಆಶೀರ್ವಾದದಿಂದ ಗೆದ್ದೆ ಜತೆಗೆ ಮಂತ್ರಿಯಾದೆ. ಹೀಗಾಗಿ ಇವತ್ತು ಒಂದೂವರೆ ಕೋಟಿ ಅನುದಾನ ನೀಡಿದ್ದೇನೆ ಎಂದು ತಂಗಡಗಿ ಹೇಳಿದರು.
ಉತ್ತಮ ಆಡಳಿತಗಾರ:ಹಾಲುಮತ ಸಮಾಜದ ಗುರು ಚಿದಾನಂದಯ್ಯ ಗುರುವಿನ ತುರುವಿಹಾಳ್ ಮಾತನಾಡಿ, ಸಮಾಜದಲ್ಲಿ ಹಾಲುಮತ ಸಮಾಜಕ್ಕೆ ಗೌರವಯುತ ಸ್ಥಾನಮಾನ ಇದೆ. ಅದನ್ನು ಕಾಪಾಡಿಕೊಂಡು ಹೋಗಬೇಕಾಗಿರುವುದು ನಮ್ಮ ಕರ್ತವ್ಯ, ಇನ್ನು ಸಚಿವ ಶಿವರಾಜ ತಂಗಡಗಿ ಉತ್ತಮ ಆಡಳಿತಗಾರ, ಅಭಿವೃದ್ಧಿ ಹರಿಕಾರರಾಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದಿದ್ದಾರೆ. ಅವರು ರಾಜಕೀಯವಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.ಈ ವೇಳೆ ಹಾಲುಮತ ಸಮಾಜದ ಗುರುಗಳಾದ ಸಿದ್ಧರಾಮಯ್ಯ ಗುರುವಿನ ಮಠ ಬಸಪಟ್ಟಣ, ಜನಗಂಡೆಪ್ಪ ಪೂಜಾರ, ಕೊಟ್ನೆಕಲ್ ಗ್ರಾಮದ ಹಿರೇಮಠದ ಗುರುಸಂಗಯ್ಯಸ್ವಾಮಿಯವರಿಗೆ ಸಮಾಜದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬರಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸರ್ವ ಸಮಾಜದ ಮುಖಂಡರಿದ್ದರು.