ಶಿವಮೊಗ್ಗ: ಸಚಿವ ಜಮೀರ್ ಅಹಮದ್‍ರವರಿಗೆ ಉಪಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸೈಯದ್ ಮುಜೀಬುಲ್ಲಾ ಆಗ್ರಹಿಸಿದರು.
ಬಲ್ಕಿಶ್ ಬಾನು ಅವರು ವಿಧಾನ ಪರಿಷತ್ ಸದಸ್ಯರಾಗಿ ಜಿಲ್ಲೆಯ ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯ ವಿಧಾನಪರಿಷತ್ ಸದಸ್ಯರಾಗಿ, ಜನಪರವಾಗಿ ಕೆಲಸ ಮಾಡುತ್ತಾ ಸರ್ಕಾರದ ಘನತೆಯನ್ನು ಹೆಚ್ಚಿಸಿ ಜಿಲ್ಲೆಯಲ್ಲಿ ಕ್ರಿಯಾಶೀಲ ಜನನಾಯಕಿಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಿಂದ ಈವರೆಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಸಚಿವರನ್ನಾಗಿ ಮಾಡಿಲ್ಲ. ಹಾಗಾಗಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸಿಗಬೇಕಾದ ನ್ಯಾಯವನ್ನು ನೀಡುವ ನಿಟ್ಟಿನಲ್ಲಿ ಬಲ್ಕಿಶ್ ಬಾನು ಅವರನ್ನು ಸಚಿವರನ್ನಾಗಿ ನೇಮಕ ಮಾಡಬೇಕು. ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ, ನಿಗಮ ಮಂಡಳಿಗಳಲ್ಲೂ ಸಹ ಅಲ್ಪಸಂಖ್ಯಾತ ಸಮುದಾಯವನ್ನು ಪರಿಗಣಿಸುವಂತೆ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಸೈಮನ್ ರಾಜ್, ಪದಾಧಿಕಾರಿಗಳಾದ ಜಫರುಲ್ಲಾ ಷರೀಫ್, ಷಮೂನ್ ಷರೀಫ್, ನಜರುಲ್ಲಾ, ಫಯಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.