ಎಲ್ಲರೂ ಸ್ವದೇಶಿ ವಸ್ತುಗಳ ಬಳಕೆ ಮಾಡಲಿ

KannadaprabhaNewsNetwork |  
Published : Jan 17, 2025, 12:46 AM IST
ಕಟ್ಟಿಗೆಯ ಗಣೇಶಗುಡಿಯಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಧಾರ್ಮಿಕ ಕಾರ್ಯಕ್ರಮ, ಬೌದ್ಧಿಕ, ಉಪನ್ಯಾಸ ನಡೆಯಿತು. | Kannada Prabha

ಸಾರಾಂಶ

ಹಿಂದೆ ಹೊರರಾಷ್ಟ್ರಗಳಿಂದ ಆಮದಾಗುವ ಪ್ರಮಾಣ ಎಷ್ಟಿತ್ತೆಂದರೆ ನಾವು ಹಣೆಗೆ ಇಡುವ ತಿಲಕವೂ ಬೇರೆ ರಾಷ್ಟ್ರದಿಂದಲೇ ಬರುತ್ತಿತ್ತು

ಯಲ್ಲಾಪುರ: ಹಿಂದೂ ಎನ್ನುವುದು ಬರೀ ಒಂದು ಧರ್ಮವಲ್ಲ. ಅದು ಒಂದು ಜೀವನಕ್ರಮ. ಹಿಂದೂ ರಾಷ್ಟ್ರದಲ್ಲಿ ಯಾರೆಲ್ಲ ವಾಸಿಸುತ್ತಾರೋ ಅವರೆಲ್ಲ ಹಿಂದೂಗಳೇ ಆಗಿದ್ದಾರೆ. ಎಲ್ಲರೂ ಸ್ವದೇಶಿ ವಸ್ತುಗಳನ್ನೇ ಬಳಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೌದ್ಧಿಕ ಪ್ರಮುಖರಾದ ನಾಗೇಶ ಶಿರಸಿ ತಿಳಿಸಿದರು.

ತಾಲೂಕಿನ ದೇಹಳ್ಳಿ ಗ್ರಾಪಂ ವ್ಯಾಪ್ತಿಯ ಕಟ್ಟಿಗೆಯ ಶ್ರೀಕ್ಷೇತ್ರ ಗಣೇಶಗುಡಿಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಶೇಷ ವಕ್ತಾರರಾಗಿ ಮಾತನಾಡಿದರು.

ಹಿಂದೆ ಹೊರರಾಷ್ಟ್ರಗಳಿಂದ ಆಮದಾಗುವ ಪ್ರಮಾಣ ಎಷ್ಟಿತ್ತೆಂದರೆ ನಾವು ಹಣೆಗೆ ಇಡುವ ತಿಲಕವೂ ಬೇರೆ ರಾಷ್ಟ್ರದಿಂದಲೇ ಬರುತ್ತಿತ್ತು. ಆದರೆ ಇಂದು ಎಲ್ಲವನ್ನೂ ನಾವೇ ತಯಾರಿಸುವ ಹಂತವನ್ನು ತಲುಪಿದ್ದೇವೆ ಎಂದ ಅವರು, ಮಕರ ಸಂಕ್ರಾಂತಿ ಈ ಪರ್ವಕಾಲದಲ್ಲಿ ಸೂರ್ಯ ದಕ್ಷಿಣದಿಂದ ಉತ್ತರಾಯಣದೆಡೆ ತನ್ನ ಪಥವನ್ನು ಚಲಿಸುತ್ತಾನೆ. ಹಾಗಾಗಿಯೇ ಈ ಸಂಕ್ರಾಂತಿಗೆ ಅಷ್ಟು ಮಹತ್ವ ಹಿಂದೂ ಧರ್ಮದಲ್ಲಿದೆ ಎಂದರು.

ಆರೋಗ್ಯ ಭಾರತಿಯ ಶಿರಸಿ ವಿಭಾಗದ ಸಂಯೋಜಕ ಹೊನ್ನಾವರದ ಆಯುರ್ವೇದ ವೈದ್ಯ ಡಾ. ಮಂಜುನಾಥ ಅವರು, ಆಹಾರ ಆರೋಗ್ಯದ ಕುರಿತು ಆಹಾರ ಸೇವನೆಯು ಹೇಗಿರಬೇಕು ಎಂದರೆ ದೇಹಕ್ಕೆ, ಮನಸ್ಸಿಗೆ ಹಿತವಾದ ಆಹಾರವನ್ನು ಮಿತವಾಗಿ ಋತುಕಾಲಕ್ಕೆ ತಕ್ಕಂತೆ ದೇಹ ಪ್ರಕೃತಿಗೆ ಅನುಗುಣವಾಗಿ ಸೇವಿಸಬೇಕು. ನಾವು ಸೇವಿಸುವ ಆಹಾರದಂತೆ ನಮ್ಮ ಸ್ವಭಾವವೂ ಬದಲಾಗುತ್ತದೆ ಎಂದರು.

ನಾವೇ ಬೆಳೆದ ತರಕಾರಿ, ಹಣ್ಣುಗಳನ್ನು ಸೇವಿಸುವುದು ಉತ್ತಮ. ಮೂರು ದೋಷಗಳಾದ ವಾತ, ಪಿತ್ತ, ಕಫದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದ ಅವರು, ಶ್ವಾಸಕ್ಕೂ ಆಯುಷ್ಯಕ್ಕೂ ಸಂಬಂಧವಿದೆ. ಶ್ವಾನವು ನಿಮಿಷಕ್ಕೆ ೪೦ ಬಾರಿ ಉಸಿರಾಡುತ್ತದೆ. ಹಾಗಾಗಿ ಅದರ ಆಯುಷ್ಯ ಕಡಿಮೆ. ಆದರೆ, ಆಮೆ ನಿಮಿಷಕ್ಕೆ ೩- ೪ ಬಾರಿಯಷ್ಟೇ ಉಸಿರಾಡುತ್ತದೆ. ಹಾಗಾಗಿ ಆಮೆಯ ಆಯುಷ್ಯ ೨೦೦ ವರ್ಷ. ನಾವು ಕೋಪ, ಆವೇಶದಲ್ಲಿರುವಾಗ ನಮ್ಮ ಉಸಿರಾಟದ ಪ್ರಮಾಣ ಹೆಚ್ಚು. ಪ್ರಾಣಾಯಾಮ, ಧ್ಯಾನ, ಯೋಗದ ಪ್ರಯೋಜನವನ್ನು ಪಡೆಯುವ ಮೂಲಕ ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಎಂದರು.

ಹಿರಿಯರಾದ ಶ್ರೀಪತಿ ಕೋಟೆಮನೆ ಅಧ್ಯಕ್ಷತೆ ವಹಿಸಿದ್ದರು. ಮಹತೀ ಮೆಣಸುಮನೆ ಪ್ರಾರ್ಥಸಿದರು. ಡಾ. ಮಹೇಶ ಭಟ್ಟ ಇಡಗುಂದಿ ವಿರಚಿತ ಭಾರತಮಾತೃಷ್ಟಕಮ್‌ಅನ್ನು ವಿನುತಾ ಕೋಟೆಮನೆ ಮತ್ತು ಸ್ವರ್ಣಗೌರಿ ಮೆಣಸುಮನೆ ಪಠಿಸಿದರು. ಗಣಪತಿ ಮೆಣಸುಮನೆ ನಿರ್ವಹಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ