ವಿಧಾನಸಭೆ : ರಾಜ್ಯದಲ್ಲಿನ ಎಲ್ಲಾ ಮಾಲ್‌ಗಳಿಗೆ ರಾಜ್ಯದ ಉಡುಪುಗಳನ್ನು ಧರಿಸಿ ಪ್ರವೇಶಿಸಲು ನಿರ್ಬಂಧ ಹೇರದಂತೆ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ಪ್ರಶ್ನೋತ್ತರ ಬಳಿಕ ಸ್ವಯಂ ಹೇಳಿಕೆ ನೀಡಿದ ಅವರು, ಪಂಚೆ (ಧೋತರ/ಧೋತಿ) ಉಟ್ಟುಕೊಂಡು ಬಂದಿದ್ದ ರಾಣೆಬೆನ್ನೂರಿನ ರೈತರೊಬ್ಬರಿಗೆ ಬೆಂಗಳೂರಿನ ಜಿಟಿ ಮಾಲ್‍ಗೆ ಪ್ರವೇಶ ನೀಡದ ಘಟನೆ ಸದನದಲ್ಲಿ ಚರ್ಚೆಯಾಗಿದೆ. ಇಂತಹ ಘಟನೆ ಮರುಕಳಿಸದಂತೆ ಸರ್ಕಾರದಿಂದಲೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದರು.
ಪಂಚೆ ಉಟ್ಟುಕೊಂಡು ಬಂದವರಿಗೆ ಯಾವುದೇ ಮಾಲ್‍ಗಳಲ್ಲಿ ಪ್ರವೇಶ ನಿರಾಕರಣೆ ಮಾಡಬಾರದು. ರೈತರಿಗೆ ಪ್ರವೇಶ ನೀಡದ ಮಾಲ್‍ಗೆ ನೋಟೀಸ್ ನೀಡಲಾಗಿತ್ತು. ಪಂಚೆ ನಮ್ಮ ಸಂಸ್ಕೃತಿ. ಇದಕ್ಕೆ ಪೂರಕವಾಗಿ ನಿಯಮ ತರಲಾಗುವುದು. ಇಡೀ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳು ನಡೆಯದಂತೆ ನಿಯಮಾವಳಿ ರೂಪಿಸಲಾಗುವುದು ಎಂದರು.
ಜಿಟಿ ಮಾಲ್ ಆರಂಭಕ್ಕೆ ಅವಕಾಶ:
ಜಿ.ಟಿ ಮಾಲ್‌ಗೆ ಪಂಚೆ ಉಟ್ಟುಕೊಂಡು ಬಂದ ರೈತನಿಗೆ ಪ್ರವೇಶ ನೀಡದೆ ಇದ್ದ ಕಾರಣ ಮಾಲ್ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. 2 ಕೋಟಿ ರು.ನಷ್ಟು ತೆರಿಗೆ ಬಾಕಿ ಇದ್ದು, ಚೆಕ್ ನೀಡಿದ್ದಾರೆ. ಮಾಲ್‌ನವರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿರುವ ಹಿನ್ನೆಲೆಯಲ್ಲಿ ಆರಂಭಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ಕೆಲವು ಕ್ಲಬ್ ಗಳಲ್ಲಿ ಪಂಚೆ ಹಾಕಿದ್ದರೆ, ಶೂ ಹಾಕದಿದ್ದರೆ ಒಳಗೆ ಬಿಡುವುದಿಲ್ಲ. ಇದರ ಬಗ್ಗೆಯೂ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಪರವಾನಗಿ ನೀಡುವ ಸಂದರ್ಭದಲ್ಲಿಯೇ ಗ್ರಾಮೀಣ ಉಡುಪುಗಳಿಗೆ ತೊಂದರೆ ನೀಡಬಾರದು ಎಂಬುದನ್ನು ಸೇರಿಸಬೇಕು. ಆಗ ಪರವಾನಗಿ ಪಡೆಯುವ ವೇಳೆಯೇ ನಿಯಮಕ್ಕೆ ಬದ್ಧವಾಗಿರಬೇಕಾಗುತ್ತದೆ ಎಂದು ಸಲಹೆ ನೀಡಿದರು.