- ಬಿಸಿಯೂಟ ತಯಾರಕರ ಜಿಲ್ಲಾ ಸಮಾವೇಶದಲ್ಲಿ ಪ್ರೊ. ಎ.ಬಿ. ರಾಮಚಂದ್ರಪ್ಪ
ಹರಿಹರ ನಗರದ ಹೊರವಲಯದ ಮೈತ್ರಿವವನದ ಪ್ರೊ. ಬಿ.ಕೃಷ್ಣಪ್ಪ ಸ್ಮಾರಕ ಭವನದಲ್ಲಿ ಶನಿವಾರ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ತಳಮಟ್ಟದಲ್ಲಿ ಕೆಲಸ ಮಾಡುವ ಅಕ್ಷರ ದಾಸೋಹದ ಬಿಸಿಯೂಟ ತಯಾರಕರು ಸಮಾಜದಲ್ಲಿ ವೈಚಾರಿಕರೆ ಬಿತ್ತುವ ಮೂಲಕ ಬದಲಾವಣೆಗೆ ಮುನ್ನುಡಿ ಬರೆಯಬೇಕು ಎಂದರು.
ಅಪಮಾನ, ಅವಮಾನ, ನೋವು, ಸಂಕಟವನ್ನು ಅನುಭವಿಸುವ ನೀವುಗಳು, ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ, ರೀತಿ, ಧೋರಣೆಗಳು ಸರ್ವೇ ಸಾಮಾನ್ಯ ಎಂಬುದನ್ನು ಅರಿಯಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಉನ್ನತ ಸ್ಥಾನಕ್ಕೇರುವಂತೆ ಮಾಡುವ ಮೂಲಕ ನೀವು ಅನುಭವಿಸಿದ ನೋವು, ಅವಮಾನ, ಅಪಮಾನಕ್ಕೆ ಉತ್ತರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಹಿಂದಿನಿಂದಲೂ ಕಾಮ್ರೆಡ್ ಪಂಪಾಪತಿ, ಎಚ್.ಕೆ.ರಾಮಚಂದ್ರಪ್ಪ, ಹನುಮಂತಪ್ಪ ಸೇರಿದಂತೆ ಅನೇಕ ನಾಯಕರು ದುಡಿಯುವ ಕಾರ್ಮಿಕರು, ಮಹಿಳೆಯರ ಹಲವಾರು ದಶಕಗಳ ಕಾಲ ಹೋರಾಟ ನಡೆಸಿಕೊಂಡು ಬಂದಿದ್ದರು. ಅದೇ ಪರಂಪರೆಯನ್ನು ಇಂದು ಕಾರ್ಮಿಕ ಮುಖಂಡರಾದ ಆನಂದರಾಜ, ಆವರಗೆರೆ ಎಚ್.ಜಿ. ಉಮೇಶ, ಆವರಗೆರೆ ಚಂದ್ರು, ಕೆ.ರಾಘವೇಂದ್ರ ನಾಯರಿ ಅವರಂಥವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ರಾಜ್ಯದಲ್ಲಿ ಸುಮಾರು 1.20 ಲಕ್ಷ ಜನ ಬಿಸಿಯೂಟ ತಯಾರಕರು, ಸಹಾಯಕಿಯರಿದ್ದಾರೆ. ಅತಿ ಕಡಿಮೆ ಗೌರವಧನಕ್ಕೆ ನಿಸ್ವಾರ್ಥ ಸೇವೆ ನೀಡುತ್ತಿರುವ ಬಿಸಿಯೂಟ ತಯಾರಕರನ್ನು ಸರ್ಕಾರಿ ನೌಕರರೆಂದು ಸರ್ಕಾರ ಪರಿಗಣಿಸಬೇಕು. ಕನಿಷ್ಠ ವೇತನ-1981ಕ್ಕೆ ಅಗತ್ಯ ತಿದ್ದುಪಡಿ ತರುವ ಮೂಲಕ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಮೊಹಮ್ಮದ್ ಭಾಷಾ, ಕೆ.ಬಾನಪ್ಪ, ಮಳಲ್ಕೆರೆ ಜಯಮ್ಮ ಕಾರ್ಯಕ್ರಮ ನಡೆಸಿಕೊಟ್ಟರು. ಐರಣಿ ಚಂದ್ರು ಹಾಗೂ ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಕಾಮ್ರೆಡ್ ಶೇಖರಪ್ಪ, ಸುರೇಶ, ಪಂಪಾಪತಿ ಇತರರು ಪಾಲ್ಗೊಂಡಿದ್ದರು.
ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ಸಮಾವೇಶವನ್ನು ಪ್ರೊ. ಎ.ಬಿ. ರಾಮಚಂದ್ರಪ್ಪ ಉದ್ಘಾಟಿಸಿದರು.