ಎಸ್ಸಿ ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಡಿಸಿಪಿ ಸಿದ್ಧಾರ್ಥ್ ಗೋಯಲ್ ಮಾಹಿತಿಕನ್ನಡಪ್ರಭ ವಾರ್ತೆ ಮಂಗಳೂರು
ನಾಗರಿಕ ಹಕ್ಕು ನಿರ್ದೇಶನಾಲಯ (ಡಿಸಿಆರ್‌ಇ) ಠಾಣೆಯು ದ.ಕ.ದಲ್ಲಿ ಕಾರ್ಯಾರಂಭ ಮಾಡಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ತಮ್ಮ ಯಾವುದೇ ರೀತಿಯ ಕುಂದು ಕೊರತೆ ದೂರುಗಳನ್ನು ಈ ಠಾಣೆಗೆ ನೀಡಬಹುದು. ಡಿಸಿಆರ್‌ಇಗೆ ವಿಶೇಷ ಅಧಿಕಾರ ನೀಡಲಾಗಿದ್ದು, ದಲಿತರಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ಕುಂದು ಕೊರತೆಗಳು ಅಲ್ಲಿಂದಲೇ ವಿಚಾರಣೆಗೆ ಒಳಪಡಲಿವೆ ಎಂದು ಡಿಸಿಪಿ ಸಿದ್ಧಾರ್ಥ್ ಗೋಯಲ್ ತಿಳಿಸಿದ್ದಾರೆ.ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಭಾನುವಾರ ದಲಿತರ ಕುಂದುಕೊರತೆ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.ಎಎಸ್ಪಿ ರಾಜೇಂದ್ರ ಮಾತನಾಡಿ, ಎಫ್‌ಐಆರ್ ಪ್ರಕರಣವಲ್ಲದೆ, ದೂರು ಅರ್ಜಿಗಳನ್ನು ಕೂಡ ಡಿಸಿಆರ್‌ಇ ಠಾಣೆಗೆ ನೀಡಬಹುದು ಎಂದು ತಿಳಿಸಿದರು.ಡಿಸಿಆರ್‌ಇ ಎಸ್ಪಿ ಸಿ.ಎ. ಸೈಮನ್ ಮಾತನಾಡಿ, ನಾಗರಿಕ ಹಕ್ಕು ನಿರ್ದೇಶನಾಲಯದ ಆದೇಶದಂತೆ ಶೇ.18ರ ಮೀಸಲಾತಿ ಉಲ್ಲಂಘನೆ, ಪರಿಶಿಷ್ಟರ ಕಲ್ಯಾಣಕ್ಕಾಗಿ ನೀಡಿದ ಅನುದಾನ ದುರುಪಯೋಗ, ಸರ್ಕಾರಿ ಭೂಮಿ ಮಂಜೂರು ಮಾಡುವ ಆದೇಶ ಉಲ್ಲಂಘನೆ, ಗೋಮಾಳ ಭೂಮಿಯಿಂದ ಪರಿಶಿಷ್ಟರನ್ನು ಕಾನೂನು ವಿರುದ್ಧ ಒಕ್ಕಲೆಬ್ಬಿಸುವ ಬಗ್ಗೆ, ನಿವೇಶನಗಳ ಹಂಚಿಕೆ ನಿಯಮಗಳ ಉಲ್ಲಂಘನೆ, ನಿಯಮಬಾಹಿರ ಜಮೀನುಗಳ ಪರಭಾರೆ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದು, ಜೀತ ನಿರ್ಮೂಲನೆ ಕಾಯ್ದೆಯಡಿ ದಾಖಲಾದ ಪ್ರಕರಣ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಅನುದಾನದ ದುರುಪಯೋಗ, ಸಂವಿಧಾನಾತ್ಮಕ ರಕ್ಷಣೆ ಉಲ್ಲಂಘನೆ ಮೊದಲಾದ ದೂರು ಅರ್ಜಿಗಳನ್ನು ಡಿಸಿಆರ್‌ಇ ಠಾಣೆಗೆ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಡಿಸಿಪಿ ರವಿಶಂಕರ್ ಇದ್ದರು................ವಿಟ್ಲ ಪೋಕ್ಸೋ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ: ಆರೋಪಸಭೆಯಲ್ಲಿ, ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳು ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ಬಾಲಕಿಗೆ ಇನ್ನೂ ನ್ಯಾಯ ದೊರಕಿಲ್ಲ. ಆರೋಪಿಯ ಬಂಧನವಾಗಿಲ್ಲ ಎಂದು ದಲಿತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣದ ಬಗ್ಗೆ ದಲಿತ ಹಾಗೂ ಇತರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರೂ ನ್ಯಾಯ ದೊರಕಿಲ್ಲ ಎಂದು ಆರೋಪಿಸಿದರು. ಪ್ರತಿಕ್ರಿಯಿಸಿದ ಎಎಸ್ಪಿ ರಾಜೇಂದ್ರ, ಈ ಪ್ರಕರಣ ಚಾರ್ಜ್‌ಶೀಟ್ ಹಂತಕ್ಕೆ ಬಂದಿದೆ ಎಂದು ತಿಳಿಸಿದರು.ನಿಷೇಧಿತ ಮಾದಕ ದ್ರವ್ಯಗಳ ಬಳಕೆ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ ಪೊಲೀಸರ ಸ್ಪಂದನೆ ವಿಳಂಬವಾಗುತ್ತಿದೆ. ಉಳ್ಳಾಲದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಠಾಣಾ ಸಭೆಯಲ್ಲಿ ಮನವಿ ಮಾಡಿದರೂ ಯಾವುದೇ ಕ್ರಮ ವಹಿಸಲಾಗಿಲ್ಲ. 10 ದಿನ ಬಳಿಕ ಪೊಲೀಸ್ ಆಯುಕ್ತರಿಗೆ ತಿಳಿಸಿದಾಗ ಕ್ರಮ ವಹಿಸಲಾಯಿತು ಎಂದು ಗಿರೀಶ್ ಕುಮಾರ್ ಆಕ್ಷೇಪಿಸಿದರು.ಬೆಂದೂರ್‌ವೆಲ್ ಪಂಪ್‌ಹೌಸ್‌ನಲ್ಲಿ 20 ವರ್ಷದಿಂದ ಕೆಲಸ ಮಾಡುತ್ತಿದ್ದ ದಲಿತ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಬೇರೆಯವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.ಉರ್ವಸ್ಟೋರ್‌ನಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನದ ಎದುರು ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಬೇಕು ಎಂಬ ಬೇಡಿಕೆ ಕೇಳಿಬಂತು.