ಕಾರವಾರ: ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಜೊತೆಗೆ ಪಾಲಕರಿಗೆ ಸಾಲು ಸಾಲು ರಜೆ. ಇದರಿಂದ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಹೆಚ್ಚಿದೆ.
ಪ್ರವಾಸಿಗರ ಭರಾಟೆಯಿಂದಾಗಿ ಗೋಕರ್ಣದ ಹೊಟೇಲ್, ಲಾಡ್ಜ್, ರೆಸಾರ್ಟ್, ಕಾಟೇಜ್, ಹೋಂಸ್ಟೇಗಳು ಭರ್ತಿಯಾಗುತ್ತಿವೆ. ಮುಖ್ಯ ಕಡಲತೀರ, ಓಂ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್ ಗಳಲ್ಲೂ ಪ್ರವಾಸಿಗರು ವಿಹರಿಸುತ್ತಿದ್ದಾರೆ. ರಥಬೀದಿ, ಮಹಾಬಲೇಶ್ವರ ದೇವಾಲಯ, ಮಹಾಗಣಪತಿ, ತಾಮ್ರಗೌರಿ ದೇವಾಲಯಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಿದೆ.
ಗೋಕರ್ಣ ಪೌರಾಣಿಕವಾಗಿ ಪ್ರಸಿದ್ಧಿಯ ಜೊತೆಗೆ ಜಾಗತಿಕ ಪ್ರವಾಸಿ ತಾಣವಾಗಿ ಬೆಳೆದಿದೆ. ಪ್ರವಾಸಿಗರು ಹಾಗೂ ಭಕ್ತರು ಇಲ್ಲಿಗೆ ಆಗಮಿಸುವುದರಿಂದ ಜನಜಂಗುಳಿ ಹೆಚ್ಚಿದೆ.ಮುರ್ಡೇಶ್ವರ ಕಡಲತೀರ ಹಾಗೂ ದೇವಾಲಯಗಳಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಪ್ರವಾಸಿಗರೂ ಕಡಲತೀರದಲ್ಲಿ ವಿಹರಿಸುತ್ತಿದ್ದಾರೆ. ಕರಾವಳಿಯಲ್ಲಿ ಈಗ ವಿಪರೀತ ಬಿಸಿಲಿನ ಝಳ, ತಡೆಯಲಾರದ ಸೆಕೆ. ಆದರೆ ಇಲ್ಲಿನ ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೇ ಪ್ರವಾಸಿಗರು ಆಗಮಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳಿವೆ. ನೈಸರ್ಗಿಕ ತಾಣಗಳಿವೆ. ಮಾನವ ನಿರ್ಮಿತ ತಾಣಗಳಿವೆ. ಐತಿಹಾಸಿಕ ಸ್ಥಳಗಳಿವೆ. ವಿಶಾಲವಾದ ಕಡಲತೀರ, ಜಲಪಾತಗಳಿವೆ. ವಿವಿಧ ರೀತಿಯ ಅಭಿರುಚಿಯ ಪ್ರವಾಸಿಗರಿಗೆ ಉತ್ತರ ಕನ್ನಡ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಹೀಗಾಗಿ ಪ್ರವಾಸಿಗರು ತಮಗೆ ಬೇಕಾದ ತಾಣಗಳಿಗೆ ಬರುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.