ಬ್ಯಾಡಗಿ: ಕರ್ನಾಟಕದಲ್ಲಿ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಆಂದೋಲನ ಚರಿತ್ರಾರ್ಹವಾದುದು ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ, ಸ್ತ್ರೀ ಶೋಷಣೆ, ಮೌಢ್ಯ, ವರ್ಣಭೇದ, ವರ್ಗ ಭೇದಗಳ ತಾರತಮ್ಯದಿಂದ ತತ್ತರಿಸಿದ್ದ ಮಾನವ ಸಮುದಾಯಕ್ಕೆ ದಯೆ, ಪ್ರೀತಿ, ಅನುಕಂಪದ ಮಾನವೀಯ ಸ್ಪರ್ಶವನ್ನು ನೀಡಿದ ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸಮಗ್ರ ಕ್ರಾಂತಿ ವಿಶ್ವದ ಇತಿಹಾಸದಲ್ಲಿಯೇ ಅಪೂರ್ವವಾದುದು ಎಂದರು.
ವೈಚಾರಿಕ ಚಿಂತನೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಬಸವಣ್ಣನವರ, ಹಲವು ಮೌಢ್ಯಗಳನ್ನು ತೊಡೆದು ಹಾಕಲು ಶ್ರಮಿಸಿದ್ದಾರೆ. ಮೌಢ್ಯತೆಯ ಹೆಸರಲ್ಲಿ ನಡೆಯುತ್ತಿದ್ದ ಡಾಂಭಿಕ ಆಚರಣೆಗಳ ಬಗ್ಗೆ ಧ್ವನಿ ಎತ್ತಿ ಪ್ರಶ್ನೆ ಮಾಡುವ ಮೂಲಕ ವೈಚಾರಿಕ ಚಿಂತನೆಗೆ ನಮ್ಮನ್ನೆಲ್ಲ ಇಳಿಸಿದ್ದಾರೆ ಬಸವಣ್ಣನವರು ಎಂದರು.ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೊಳ ಮಾತನಾಡಿ, ಕಾಯಕವೇ ಕೈಲಾಸ ಎಂದು ಜಗತ್ತಿಗೆ ತೋರಿಸಿದ ಮಹಾನ ಚೇತನ ಜಗಜ್ಯೋತಿ ಬಸವೇಶ್ವರರು ಜಾತಿ ಭೇದ ಮತ್ತು ತಾರತಮ್ಯವಿಲ್ಲದ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದರು. ಆದರೆ ಅವರ ಚಿಂತನೆಗಳಿಗೆ ಇನ್ನೂ ಬೆಲೆ ಸಿಗದಿರುವುದು ನೋವಿನ ಸಂಗತಿ ಎಂದರು.
ಸಾಹಿತಿ ಜೀವರಾಜ ಛತ್ರ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಮಂಜುಳಾ ನಾಯಕ್, ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ದುರ್ಗೇಶ ಗೋಣೆಮ್ಮನವರ, ವೈಟಿ ಹೆಬ್ಬಳ್ಳಿ, ಬಿಸಿಎಂ ಅಧಿಕಾರಿ ಪ್ರಸಾದಿಮಠ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಸಮ ಸಮಾಜಕ್ಕೆ ಶ್ರಮಿಸಿದ್ದ ಬಸವಣ್ಣರಾಣಿಬೆನ್ನೂರು: ಸಮ ಸಮಾಜ ನಿರ್ಮಾಣಕ್ಕೆ 12ನೇ ಶತಮಾನದಲ್ಲಿಯೇ ಬಸವಣ್ಣನವರು ಅಪಾರವಾಗಿ ಶ್ರಮಿಸಿದ್ದರು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ತಿಳಿಸಿದರು.ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ನಮಗೆಲ್ಲರಿಗೂ ದಾರಿದೀಪವಾಗಿವೆ ಎಂದರು.
ತಾಲೂಕು ಘಟಕದ ಅಧ್ಯಕ್ಷ ರಮೇಶ ಮಾಕನೂರ, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಸಿದ್ದಣ್ಣ ಗುಡಿಮುಂದ್ಲರ, ಕಾರ್ಮಿಕ ಘಟಕದ ಅಧ್ಯಕ್ಷ ಮಾಲತೇಶ ಬಡಿಗೇರ, ನಾಗರಾಜ ಅಜ್ಜನವರ, ಇಬ್ರಾಹಿಂ ಎಲ್ಗಚ್ಚ, ಚನ್ನವೀರಪ್ಪ ಬಡಿಗೇರ, ಉದಯಕುಮಾರ ಗೋಣೀರ, ಶಿವನಗೌಡ ಕಡೂರ, ಕಸ್ತೂರಿ ಅರ್ಕಸಾಲಿ, ಐಶ್ವರ್ಯ ಮಡಿವಾಳರ, ಪೂಜಾ ದೈವಜ್ಞ, ಉಷಾ ಜಡಮಲಿ ಮತ್ತಿತರರಿದ್ದರು.