ದಲಿತರಿಗೆ ರಕ್ಷಣೆ, ಭದ್ರತೆಗೆ ಡಿಡಿಎಚ್ಎಸ್ ಹೋರಾಟ

KannadaprabhaNewsNetwork |  
Published : Sep 01, 2026, 01:45 AM IST
31ಕೆಡಿವಿಜಿ5-ದಾವಣಗೆರೆಯಲ್ಲಿ ಉಪ ವಿಭಾಗಾಧಿಕಾರಿ ಸಂತೋಷ್‌ರಿಗೆ ಡಿಡಿಎಚ್‌ಎಸ್ ಮುಖಂಡರು, ಕಾರ್ಯಕರ್ತರು ಮನವಿ ಅರ್ಪಿಸಿದರು. | Kannada Prabha

ಸಾರಾಂಶ

ರಾಯಚೂರು ಜಿಲ್ಲೆಯಲ್ಲಿ ಯುವತಿ ಮೇಲೆ ಅತ್ಯಾಚಾರ, ಕೊಲೆ ಹಾಗೂ ಭೂಮಾನಂದ ಹದ್ದಿನಾಳ ಕಗ್ಗೊಲೆ ಖಂಡಿಸಿ, ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ದಲಿತ- ದಮನಿತರ ಹೋರಾಟ ಸಮಿತಿ (ಡಿಡಿಎಚ್ಎಸ್) ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

- ದಲಿತ ಯುವತಿ ಮೇಲೆ ಅತ್ಯಾಚಾರ, ಯುವ ಮುಖಂಡನ ಹತ್ಯೆಗೆ ತೀವ್ರ ಆಕ್ರೋಶ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಯಚೂರು ಜಿಲ್ಲೆಯಲ್ಲಿ ಯುವತಿ ಮೇಲೆ ಅತ್ಯಾಚಾರ, ಕೊಲೆ ಹಾಗೂ ಭೂಮಾನಂದ ಹದ್ದಿನಾಳ ಕಗ್ಗೊಲೆ ಖಂಡಿಸಿ, ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ದಲಿತ- ದಮನಿತರ ಹೋರಾಟ ಸಮಿತಿ (ಡಿಡಿಎಚ್ಎಸ್) ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಡಿಡಿಎಚ್ಎಸ್ ಸಂಘಟನೆ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ನಂತರ ಉಪವಿಭಾಗಾಧಿಕಾರಿ ಸಂತೋಷ್‌ ಮುಖಾಂತರ ಗೃಹ ಸಚಿವ ಪ್ರಿಯಾಂಕ ಖರ್ಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಅರ್ಪಿಸಿದರು.

ಸಂಘಟನೆ ಸಂಚಾಲಕ, ವಕೀಲ ಸತೀಶ ಅರವಿಂದ ಮಾತನಾಡಿ, ಸಮಾಜದಲ್ಲಿ ಇಂದಿಗೂ ದಲಿತ, ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ, ಅತ್ಯಾಚಾರ, ಕಗ್ಗೊಲೆಗಳು ನಡೆಯುತ್ತಲೆ ಇವೆ. ಇಂತಹ ಕುಕೃತ್ಯಗಳಿಗೆ ಸ್ಪಷ್ಟ ಉದಾಹರಣೆ ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಕರಣಗಳೇ ಸಾಕ್ಷಿ. ಆ.19ರಂದು ಸಂಜೆ ರಾಯಚೂರು ಜಿಲ್ಲೆ ಸಿರಿವಾರ ತಾ. ಹೊಕ್ರಾಣಿ ಗ್ರಾಮದಲ್ಲಿ ಬಯಲು ಶೌಚಾಲಯಕ್ಕೆ ಹೋಗಿದ್ದ ಯುವತಿ ಅಶ್ವಿನಿ ಹೊಕ್ರಾಣಿಯನ್ನು ಹಿಂಬಾಲಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಮೃತದೇಹವನ್ನು ಬಾವಿಗೆಸೆದು ಪೈಶಾಚಿಕ ಕೃತ್ಯ ಎಸಗಿದ್ದಾರೆ. ಇದನ್ನು ದಲಿತ ದಮನಿತರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಇನ್ನು ದೇವದುರ್ಗ ತಾ. ಹದ್ದಿನಾಳ ಗ್ರಾಮದ ದಲಿತ ಯುವ ಮುಖಂಡ ಭೂಮಾನಂದ ಸಮುದಾಯದ ಯುವಕರಲ್ಲಿ ಅಂಬೇಡ್ಕರ್ ವಿಚಾರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರ ಮಾಡುತ್ತಿದ್ದರು. ಇದನ್ನು ಸಹಿಸದ ಮನಸ್ಸುಗಳು ಆತನನ್ನು ಕಗ್ಗೋಲೆ ಮಾಡಿವೆ. ಈ ಎರಡೂ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂದು ಆಗ್ರಹಿಸಿದರು.

ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸುತ್ತೇವೆ. ದಲಿತ ಸಮುದಾಯದ ನೋವನ್ನು ಅರಿತ ಗೃಹ ಮಂತ್ರಿಗಳು ಎಲ್ಲ ಪ್ರಕರಣಗಳನ್ನು ಸಮಗ್ರವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೃತರ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ, ರಕ್ಷಣೆ ಒದಗಿಸಬೇಕು. ಈ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಮನವಿ ಮಾಡಿದರು.

ಸಂಘಟನೆ ಮುಖಂಡರಾದ ಸುರೇಶ ಶಿಡ್ಲಪ್ಪ, ವೆಂಕಟೇಶ, ಗೋವಿಂದಪ್ಪ, ನಾಗೇಶ, ರಘು, ಧರ್ಮನಾಯ್ಕ, ಸತೀಶ, ಲಕ್ಷ್ಮಣ ಇತರರು ಇದ್ದರು.

- - -

(ಕೋಟ್‌) ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಮತ್ತು ಕಗ್ಗೊಲೆಗಳನ್ನು ತಡೆಗಟ್ಟಲು ಸೂಕ್ತ ಹಾಗೂ ಪರಿಣಾಮಕಾರಿ ಮತ್ತು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು.

- ಸತೀಶ ಅರವಿಂದ, ಸಂಚಾಲಕ, ಡಿಡಿಎಚ್ಎಸ್.

- - -

-31ಕೆಡಿವಿಜಿ5.ಜೆಪಿಜಿ: ದಾವಣಗೆರೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್‌ ಅವರಿಗೆ ಡಿಡಿಎಚ್‌ಎಸ್ ಮುಖಂಡರು, ಕಾರ್ಯಕರ್ತರು ಮನವಿ ಅರ್ಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಗಳು ಜೀವನ ಮೌಲ್ಯಗಳನ್ನು ಕಲಿಸುವ ಪಾಠಶಾಲೆ
ಅಣ್ಣಾಭಾವು ಸಾಠೆ ಸಾಹಿತ್ಯವು ಸಾಮಾಜಿಕ ನ್ಯಾಯದ ಹಾದಿ: ಸೂರ್ಯಕಾಂತ