ಕನಕಪುರ: ಕ್ರೀಡೆ ಕೇವಲ ದೈಹಿಕ ಚಟುವಟಿಕೆಯಷ್ಟೇ ಅಲ್ಲ, ಅದು ಜೀವನದ ಮೌಲ್ಯಗಳನ್ನು ಕಲಿಸುವ ಒಂದು ಉತ್ತಮ ಪಾಠಶಾಲೆ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲೇಶ್‌ ಹೇಳಿದರು

ಕನಕಪುರ: ಕ್ರೀಡೆ ಕೇವಲ ದೈಹಿಕ ಚಟುವಟಿಕೆಯಷ್ಟೇ ಅಲ್ಲ, ಅದು ಜೀವನದ ಮೌಲ್ಯಗಳನ್ನು ಕಲಿಸುವ ಒಂದು ಉತ್ತಮ ಪಾಠಶಾಲೆ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲೇಶ್‌ ಹೇಳಿದರು.

ತಾಲೂಕಿನ ಕೋಡಿಹಳ್ಳಿಯ ಗೌರಮ್ಮ ಮತ್ತು ಡಿ.ಕೆ.ಕೆಂಪೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಮಟ್ಟದ ಡಿಕೆ ಬ್ರದರ್ಸ್‌ ಕಪ್ ಸ್ಟೂಡೆಂಟ್‌ ಪ್ರೀಮಿಯರ್‌ ಲೀಗ್ ಕ್ರಿಕೆಟ್‌ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರಿಕೆಟ್‌ ವಿದ್ಯಾರ್ಥಿಗಳಲ್ಲಿ ಪರಸ್ಪರ ಸಹಕಾರ, ತಾಳ್ಮೆ ಸಂವಹನ, ನಾಯಕತ್ವ ಮತ್ತು ಜವಾಬ್ದಾರಿಗಳನ್ನು ಬೆಳೆಸುತ್ತವೆ. ಮೈದಾನದಲ್ಲಿ ಪ್ರತಿಯೊಬ್ಬ ಆಟಗಾರನ ಕೊಡುಗೆ ತಂಡದ ಯಶಸ್ಸಿಗೆ ಅಗತ್ಯ. ಕ್ರೀಡೆಗಳು ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಬೆಳೆಸುತ್ತವೆ. ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನ ಮನೋಭಾವದಿಂದ ಸ್ವೀಕರಿಸಬೇಕು. ಸೋಲು ಮುಂದಿನ ಗೆಲುವಿಗೆ ಪಾಠವಾಗಬೇಕು. ಗೆಲುವು ಇನ್ನಷ್ಟು ಉತ್ತಮ ಸಾಧನೆಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.

ಕೋಡಿಹಳ್ಳಿಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಟಿ.ವೆಂಕಟೇಶ್‌ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ಮಾತ್ರವಲ್ಲದೆ ಮಾನಸಿಕ ಸದೃಢತೆಯೂ ಹೆಚ್ಚುತ್ತದೆ. ಕ್ರೀಡೆ ಸಮಯ ಪಾಲನೆ, ಶಿಸ್ತು, ಪರಿಶ್ರಮ, ತಾಳ್ಮೆ ಮತ್ತು ಜವಾಬ್ದಾರಿಯನ್ನು ಬೆಳೆಸುತ್ತದೆ. ಗೆಲ್ಲುವುದು ಮುಖ್ಯವಾದರೂ, ಉತ್ತಮವಾಗಿ ಆಡುವುದು ಇನ್ನೂ ಮುಖ್ಯ. ಕ್ರೀಡೆಯಲ್ಲಿ ಗೆಲುವಿಗಿಂತ ಕ್ರೀಡಾಸ್ಫೂರ್ತಿ ಶ್ರೇಷ್ಠ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮುನಿಹುಚ್ಚೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್‌, ಪ್ರೊ.ಟಿ.ಆರ್‌.ನಳಿನಾದೇವಿ , ಐಕ್ಯುಎಸಿ ಸಂಚಾಲಕ ಡಾ.ಸಂತೋಷಿ, ಪ್ರೊ.ವಿಶಾಲಾಕ್ಷಿ, ಡಾ. ಜೋಕಿಮ್‌ ಡಿಸಿಲ್ವ, ಪ್ರೊ. ಸುಧಾ, ಪ್ರೊ.ಅವಿನಾಶ್‌, ಪ್ರೊ.ರಾಧಾಕೃಷ್ಣ, ಪ್ರೊ.ಚೈತ್ರ ಹಾಗೂ ಪ್ರೊ.ಪ್ರಿಯಾಂಕ ಉಪಸ್ಥಿತರಿದ್ದರು.

(ಫೋಟೊ ಕ್ಯಾಫ್ಷನ್‌)

ಕನಕಪುರ ತಾಲೂಕಿನ ಕೋಡಿಹಳ್ಳಿಯ ಗೌರಮ್ಮ ಮತ್ತು ಡಿ.ಕೆ.ಕೆಂಪೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಮಟ್ಟದ ಡಿಕೆ ಬ್ರದರ್ಸ್‌ ಕಪ್ ಸ್ಟೂಡೆಂಟ್‌ ಪ್ರೀಮಿಯರ್‌ ಲೀಗ್ ಕ್ರಿಕೆಟ್‌ ಕ್ರೀಡಾಕೂಟಕ್ಕೆ ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲೇಶ್‌ ಚಾಲನೆ ನೀಡಿದರು.