ಪ್ರವಾದಿ ಮುಹಮ್ಮದ್‌ ಅವರು ದೇವರಿಂದ ನಿಯುಕ್ತರಾಗಿ ದೇವ ಸಂದೇಶದ ಸಾಕ್ಷಿದಾರರಾಗಿಯೂ ಸುವಾರ್ತೆ ಮತ್ತು ಎಚ್ಚರಿಕೆ ನೀಡುವವರಾಗಿಯೂ ಮತ್ತು ದೇವನ ಅನುಮತಿಯಿಂದ ಅವನ ಕಡೆಗೆ ಕರೆ ನೀಡುವವರಾಗಿಯೂ ಮತ್ತು ಪ್ರಕಾಶಮಯ ಜ್ಯೋತಿಯಾಗಿದ್ದರು ಎಂದು ಜಮಾಅತೆ ಇಸ್ಲಾಮೀ ಹಿಂದ್‌ ಸದಸ್ಯ ಮುಹಮ್ಮದ್‌ ನಿಜಾಮುದ್ದಿನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಪ್ರವಾದಿ ಮುಹಮ್ಮದ್‌ ಅವರು ದೇವರಿಂದ ನಿಯುಕ್ತರಾಗಿ ದೇವ ಸಂದೇಶದ ಸಾಕ್ಷಿದಾರರಾಗಿಯೂ ಸುವಾರ್ತೆ ಮತ್ತು ಎಚ್ಚರಿಕೆ ನೀಡುವವರಾಗಿಯೂ ಮತ್ತು ದೇವನ ಅನುಮತಿಯಿಂದ ಅವನ ಕಡೆಗೆ ಕರೆ ನೀಡುವವರಾಗಿಯೂ ಮತ್ತು ಪ್ರಕಾಶಮಯ ಜ್ಯೋತಿಯಾಗಿದ್ದರು ಎಂದು ಜಮಾಅತೆ ಇಸ್ಲಾಮೀ ಹಿಂದ್‌ ಸದಸ್ಯ ಮುಹಮ್ಮದ್‌ ನಿಜಾಮುದ್ದಿನ್‌ ಹೇಳಿದರು.

ಅವರು ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್‌(ಸ) ಸೀರತ್‌ ಅಭಿಯಾನ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್‌ ಹಾಗೂ ಇದರಾ ಅದಬ್‌ ಏ ಇಸ್ಲಾಮೀ ಹಿಂದ್‌ ಬೀದರ್‌ ಸಹಯೋಗದಲ್ಲಿ ಭಾನುವಾರ ಬೀದರ್‌ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯ ಜಮಾಅತೆ ಇಸ್ಲಾಮೀ ಹಿಂದ್‌ ಅಧ್ಯಕ್ಷ ಮುಹಮ್ಮದ್‌ ಮೋಜ್ಜಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೀದರ್‌ ಜಿಲ್ಲೆಯು ಬಹುಭಾಷಿಕರ ನೆಲವಾಗಿದ್ದು, ಇಲ್ಲಿ ಕನ್ನಡ, ಹಿಂದಿ, ಉರ್ದು, ತೆಲುಗು ಹಾಗೂ ಮರಾಠಿ ಭಾಷೆಯ ಜನರು ವಾಸಿಸುತ್ತಾರೆ. ಬಹುತ್ವದ ನೆಲದಲ್ಲಿ ಎಲ್ಲಾ ಭಾಷಿಕರಿಗೂ ಪ್ರವಾದಿ ಮುಹಮ್ಮದ್‌ ಅವರ ಜೀವನ ಸಂದೇಶ ಪರಿಚಯಿಸುವ ಉದ್ದೇಶದಿಂದ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದರು.

ಕವಿಗೋಷ್ಠಿಯಲ್ಲಿ ಡಾ.ರಾಮಚಂದ್ರ ಗಣಾಪುರ, ಡಾ.ರಘುಶಂಖ ಭಾತಂಬ್ರಾ, ಡಾ.ಮಕ್ತುಂಬಿ ಎಂ., ಅಶ್ವಜೀತ್‌ ದಂಡಿನ್, ಡಾ.ಶ್ರೇಯಾ ಮಹೀಂದ್ರಕರ್‌, ಸಂಗಮೇಶ ಜವಾದಿ, ವಿದ್ಯಾವತಿ ಅವರು ಕನ್ನಡದಲ್ಲಿ ಕವಿತೆ ವಾಚಿಸಿದರು. ಜಗದೀಶ್ವರ ಬಿರಾದರ್‌, ಧನಲಕ್ಷ್ಮಿ ಪಾಟೀಲ್‌ ಇಂಗ್ಲಿಷ್‌ ಕವಿತೆ ವಾಚಿಸಿದರು. ಉರ್ದು ಭಾಷೆಯಲ್ಲಿ ಸೈಯದ್‌ ಜಮೀಲ್‌ ಹಾಸ್ಮಿ, ಮುನವ್ವರ್‌ ಅಲಿ ಶಾಹಿದ್‌, ಸೈಯದ್‌ ಖಾಸಿಂ ಸಾಜಿದ್‌, ಖಾಜಿ ಇದ್ರಿಸ್‌ ಅಲಿ, ಹಾಮೆದ್ ಸಲೀಮ್‌ ಹಾಮೆದ್, ಹೈದರ್‌ ಅಲಿ ಸೌದಾಗರ್‌ ಹಾಗೂ ಹಿಂದಿಯಲ್ಲಿ ಅಜೀಮ್‌ ಬಾದಶಾ ಕವಿತೆ ವಾಚಿಸಿದರು. ಇದರಾ ಅದಬ್‌ ಏ ಇಸ್ಲಾಮಿ ಹಿಂದ್‌ ಅಧ್ಯಕ್ಷ ರಫೀವುಝ್ಹಮಾ ಖಾದ್ರಿ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಜಮಾ ಅತೆ ಇಸ್ಲಾಮೀ ಹಿಂದ್‌ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇದರಾ ಅದಬ್‌ ಏ ಇಸ್ಲಾಮೀ ಹಿಂದ್‌ ಕಾರ್ಯದರ್ಶಿ ಹಾಮೇದ್‌ ಸಲೀಮ್‌ ಹಾಮೆದ್‌ ವಂದಿಸಿದರು.--

ಚಿತ್ರ 31ಬಿಡಿಆರ್55:

ಪ್ರವಾದಿ ಮುಹಮ್ಮದ್‌ ಕುರಿತು ಭಾನುವಾರ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ.ರಾಮಚಂದ್ರ ಗಣಾಪುರ ಕವಿತೆ ಓದಿದರು.