ಧನಾತ್ಮಕ ಹವ್ಯಾಸದಿಂದ ಒತ್ತಡ ದೂರ: ಜ್ಯೋತಿ ಹೆಗಡೆ

KannadaprabhaNewsNetwork |  
Published : May 14, 2024, 01:06 AM IST
12 ನೇ ವರ್ಷದ ಯುವ ಪ್ರತಿಭಾ ಪುರಸ್ಕಾರ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ವಿಧುಷಿ ಜ್ಯೋತಿ ಹೆಗಡೆ ಉದ್ಘಾಟಿಸಿದರು.  | Kannada Prabha

ಸಾರಾಂಶ

ಅಂಕೋಲಾ ತಾಲೂಕಿನ ಭಾಸಗೋಡದ ಗಾಂವಕರ ಮೆಮೋರಿಯಲ್ ಫೌಂಡೇಶನ್ ಆಶ್ರಯದಲ್ಲಿ 12ನೇ ವರ್ಷದ ಯುವ ಪ್ರತಿಭಾ ಪುರಸ್ಕಾರ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಉತ್ತರ ಕನ್ನಡ ಜಿಲ್ಲೆಯ 10 ತಾಲೂಕುಗಳ, 10 ವಿವಿಧ ಕ್ಷೇತ್ರಗಳ ಯುವ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಅಂಕೋಲಾ: ಉತ್ತಮ ಹವ್ಯಾಸಗಳಿಂದ ಬದುಕಿನ ಒತ್ತಡವನ್ನು ನಿಯಂತ್ರಿಸಬಹುದು. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮುಂತಾದ ಹವ್ಯಾಸಗಳಿಂದ ಬದುಕು ಒತ್ತಡದಿಂದ ಹೊರ ಬರುತ್ತದೆ ಎಂದು ವಿಶ್ವದ ಮೊದಲ ಮಹಿಳಾ ರುದ್ರ ವೀಣಾ ವಾದಕಿ ವಿದುಷಿ ಜ್ಯೋತಿ ಹೆಗಡೆ ಶಿರಸಿ ಹೇಳಿದರು.

ಅವರು ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದ ಸಾಧನಾ ವೇದಿಕೆಯಲ್ಲಿ ಭಾಸಗೋಡದ ಗಾಂವಕರ ಮೆಮೋರಿಯಲ್ ಫೌಂಡೇಶನ್ ಆಶ್ರಯದಲ್ಲಿ 12ನೇ ವರ್ಷದ ಯುವ ಪ್ರತಿಭಾ ಪುರಸ್ಕಾರ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಯಾವ ಪ್ರತಿಭೆಗಾಗಿ ಪ್ರಶಸ್ತಿ ಪುರಸ್ಕಾರವನ್ನು ಪಡೆಯುತ್ತಾರೋ ಅದನ್ನು ಮುಂದುವರಿಸಿ ಇನ್ನೂ ಹೆಚ್ಚಿನ ಪುರಸ್ಕಾರ ಪಡೆಯುವಂತಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಮಾತನಾಡಿ, ಪ್ರತಿಭೆ ಇದ್ದರೆ ಸಾಲದು, ಪ್ರಗತಿ ಸಾಧಿಸುವ ಗುರಿ, ತಂದೆ ತಾಯಿಯರಲ್ಲಿ ತಾಳ್ಮೆ ಮತ್ತು ಸಮಾಜದ ಪ್ರೋತ್ಸಾಹ ಇದ್ದರೆ ಮಾತ್ರ ಸಾಧನೆ ಮಾಡಬಹುದು ಎಂದರು.

ಗಾಂವಕರ ಮೆಮೋರಿಯಲ್ ಫೌಂಡೇಶನ್ ಕೋಶಾಧ್ಯಕ್ಷ ಚಂದ್ರಶೇಖರ ನಾಯಕ ಚರಿತ್ರೆಯಲ್ಲಿ ಅಮರಳಾದ ಅಂಕೋಲಾ ಕಣಗೀಲದ ಕಾಣಿ ಬೊಮ್ಮಕ್ಕನ ಸ್ಮರಣೆ ಕಾರ್ಯಕ್ರಮ ನಿರ್ವಹಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವಂಶಸ್ಥರಾದ ಮಲ್ಲಸರ್ಜ ಚಂದ್ರಶೇಖರ ದೇಸಾಯಿ, ಫೌಂಡೇಶನ್ ಗೌರವಾಧ್ಯಕ್ಷ ಗೋವಿಂದರಾಯ ಗಾಂವಕರ, ಗೌರವ ಕಾರ್ಯದರ್ಶಿ ರಘುವೀರ ಗಾಂವಕರ ಉಪಸ್ಥಿತರಿದ್ದರು. ಇದೇ ವೇಳೆ ಸಂಗೀತ ವಿದುಷಿ ಜ್ಯೋತಿ ಹೆಗಡೆ ಹಾಗೂ ಮಲ್ಲಸರ್ಜ ಚಂದ್ರಶೇಖರ ದೇಸಾಯಿ ಅವರನ್ನು ಗೌರವಿಸಲಾಯಿತು. ಆನಂತರ ಪ್ರತಿ ವರ್ಷದಂತೆ ಉತ್ತರ ಕನ್ನಡ ಜಿಲ್ಲೆಯ 10 ತಾಲೂಕುಗಳ, 10 ವಿವಿಧ ಕ್ಷೇತ್ರಗಳ ಯುವ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅತೀ ಕಡಿಮೆ ವಯಸ್ಸಿನಲ್ಲಿಯೇ ಅಗಾಧವಾದ ನೆನಪಿನ ಶಕ್ತಿ ಪ್ರದರ್ಶಿಸಿ ದಾಖಲೆ ಬರೆದ ಕಾರವಾರದ ಶುಭಂ ಓಂಕಾರ ಅಣ್ವೇಕರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಚೆಸ್ ಆಟಗಾರ್ತಿ ಶ್ರೀಶಾ ಶಿವಕುಮಾರ ಎಚ್., ಕುಸ್ತಿಪಟು ಶ್ವೇತಾ ಸಂಜು ಸಣ್ಣು ಅಣ್ಣಿಕೇರಿ, ಟೇಬಲ್ ಟೆನಿಸ್ ಆಟದಲ್ಲಿ ವಿಶೇಷ ಚೇತನರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಸಂದೇಶ ಕೃಷ್ಣ ಹರಿಕಂತ್ರ, ಪರ್ವತಾರೋಹಿ ಜೋಯಿಡಾದ ಸೋನಾಲಿ ವೇಳಿಪ, ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ನಲ್ಲಿ ಸಾಧನೆಗೈದ ಸ್ಫೂರ್ತಿ ನಾಯಕ, ಅಂತಾರಾಷ್ಟ್ರೀಯ ಈಜುಪಟು ಶ್ಯಾಮಸುಂದರ ಸಿದ್ದಾಪುರ, ಚಿನ್ನದ ಕುಸುರಿ ಕಲಾವಿದ ಹೊನ್ನಾವರದ ಪ್ರಸನ್ನ ಚಂದ್ರಕಾಂತ ಶೇಟ್, ಫ್ಯಾಶನ್ ಡಿಸೈನಿಂಗ್‌ನಲ್ಲಿ ಸಾಧನೆಗೈದ ಭಟ್ಕಳದ ಡಾ. ಸಜೀಲಾ ಯಾಹ್ಯ ಕೋಲಾ, ಕೃಷಿ ಸಾಧಕ ಮುಂಡಗೋಡದ ಬಸವರಾಜ ಈರಯ್ಯ ನಡುವಿನಮನಿ ಅವರನ್ನು ಸನ್ಮಾನಿಸಲಾಯಿತು.

ಗಾಂವಕರ ಮೆಮೋರಿಯಲ್ ಫೌಂಡೇಶನ್ ವತಿಯಿಂದ ವಿದ್ಯಾ ಸಂಸ್ಥೆಗಳಿಗೆ 355 ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕವಿಯಿತ್ರಿ ಅಕ್ಷತಾ ಕೃಷ್ಣಮೂರ್ತಿ ಅತಿಥಿಗಳನ್ನು ಪರಿಚಯಿಸಿದರು. ಉಡುಪಿ ವಿದ್ಯೋದಯ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ದೇವಾನಂದ ಮೋಹನ ಗಾಂವಕರ ಅವರಿಂದ ಗಾಯನ ಹಾಗೂ ಪೃಥ್ವಿ ದೇವಾನಂದ ಗಾಂವಕರ ಹಾಗೂ ಪುನೀತ ಮಾರುತಿ ನಾಯ್ಕ ಅವರಿಂದ ಯಕ್ಷನೃತ್ಯ ಕಾರ್ಯಕ್ರಮ ನಡೆಯಿತು. ವಿಘ್ನೇಶ್ ಬಾಲಚಂದ್ರ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ರಘುವೀರ ಗಾಂವಕರ ವಂದಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...