ಚುನಾವಣೆ ಬಳಿಕ ಮಹಾರಾಷ್ಟ್ರ ರೀತಿ ಕರ್ನಾಟಕ ಸರ್ಕಾರ ಪತನ: ಮಹಾ ಸಿಎಂ ಏಕನಾಥ್‌ ಶಿಂಧೆ

KannadaprabhaNewsNetwork |  
Published : May 14, 2024, 01:06 AM ISTUpdated : May 14, 2024, 06:54 AM IST
ಶಿಂಧೆ | Kannada Prabha

ಸಾರಾಂಶ

ಕರ್ನಾಟಕದಲ್ಲಿ ‘ನಾಥ್‌ ಆಪರೇಷನ್‌’ ಹೆಸರಲ್ಲಿ ರಹಸ್ಯ ಕಾರ್ಯಾಚರಣೆ ನಡೀತಿದೆ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಇಬ್ಭಾಗವಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸತಾರಾ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ತಾವು ಈ ಹಿಂದೆ ಶಿವಸೇನೆಯನ್ನು 2 ಹೋಳು ಮಾಡಿ ಬಿಜೆಪಿ ಜತೆ ಸರ್ಕಾರ ರಚಿಸಿದ ರೀತಿಯಲ್ಲಿ, ಕರ್ನಾಟಕದಲ್ಲೂ ‘ನಾಥ್‌ ಆಪರೇಷನ್‌’ ಹೆಸರಿನ ‘ರಹಸ್ಯ ಕಾರ್ಯಾಚರಣೆ’ ಲೋಕಸಭೆ ಚುನಾವಣೆ ನಂತರ ನಡೆಯಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ‘ಬಾಂಬ್‌’ ಸಿಡಿಸಿದ್ದಾರೆ. ಅರ್ಥಾತ್‌, ಕಾಂಗ್ರೆಸ್‌ 2 ಹೋಳಾಗಲಿದ್ದು, ಅದರಲ್ಲಿನ ಒಬ್ಬ ನಾಯಕ ಸಿಡಿದೆದ್ದು ಬಂದು ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ಅವರು ಯಾವ ಪಕ್ಷದ ಹೆಸರೂ ಎತ್ತದೇ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ಸತಾರಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಶಿಂಧೆ, ‘ಕರ್ನಾಟಕಕ್ಕೆ ಇತ್ತೀಚೆಗೆ ನಾನು ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ಹೋಗಿದ್ದೆ. ಆಗ ಅಲ್ಲಿನ ಕೆಲವು (ಬಿಜೆಪಿ) ನಾಯಕರು, ‘ನಾವು ಇಲ್ಲಿ ‘ನಾಥ್‌ ಆಪರೇಶನ್‌’ ಮಾಡಬೇಕಿದೆ ಎಂದರು. ನಾನು ‘ನಾಥ್‌ ಆಪರೇಶನ್‌ ಎಂದರೇನು?’ ಎಂದು ಕೇಳಿದೆ. ಅದಕ್ಕೆ ಅವರು, ‘ನೀವು ಏಕನಾಥ ಶಿಂಧೆ. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಒಡೆದು ಪ್ರತ್ಯೇಕ ಬಣ ರಚಿಸಿಕೊಂಡು ಬಿಜೆಪಿ ಜತೆ ಮೈತ್ರಿ ಸರ್ಕಾರ ಮಾಡಿದಿರಿ. ನಿಮ್ಮಿಂದ ಸ್ಫೂರ್ತಿ ಪಡೆದು ಅದೇ ರೀತಿ ನಾವು ಕರ್ನಾಟಕದಲ್ಲಿ ಮಾಡಬೇಕು ಎಂದುಕೊಂಡಿದ್ದೇವೆ. ಅದಕ್ಕೆ ನಿಮ್ಮ ಹೆಸರನ್ನೇ ‘ನಾಥ್‌ ಆಪರೇಶನ್‌’ ಎಂದು ಇಟ್ಟಿದ್ದೇವೆ’ ಎಂದು ವಿವರಿಸಿದರು’ ಎಂದರು.

‘ಇದೆಲ್ಲ ಏನು ತೋರಿಸುತ್ತದೆ ಎಂದರೆ ಕರ್ನಾಟಕದಲ್ಲೂ ಏನೋ ನಡೆದಿದೆ. ಲೋಕಸಭೆ ಚುಣಾವಣೆ ನಂತರ ಅದು ಆಗಲಿದೆ. ‘ನಿಮ್ಮ ಅನುಭವ ನಮಗೆ ತುಂಬಾ ಸಹಾಯ ಮಾಡುತ್ತಿದೆ’ ಎಂದು ಅವರು (ಬಿಜೆಪಿ ನಾಯಕರು) ನನಗೆ ಹೇಳಿದರು. ಆಗ ‘ಒಳ್ಳೇದು. ನಾನು ಆಗ ಮತ್ತೆ ಕರ್ನಾಟಕಕ್ಕೆ ಭೇಟಿ ನೀಡುವೆ’ ಎಂದು ಭರವಸೆ ನೀಡಿದೆ’ ಎಂದು ಶಿಂಧೆ ಸ್ವಾರಸ್ಯಕರವಾಗಿ ವಿವರಿಸಿದರು.ಏನಿದು ನಾಥ್‌ ಆಪರೇಶನ್‌?ಏಕನಾಥ ಶಿಂಧೆ ಅವರು ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು 2 ಹೋಳು ಮಾಡಿ ಬಿಜೆಪಿ ಜತೆ ಸರ್ಕಾರ ರಚಿಸಿದ್ದರು. ಈಗ ಏಕ‘ನಾಥ್‌’ ಅವರಿಂದ ಸ್ಫೂರ್ತಿ ಪಡೆದು ಪಕ್ಷವೊಂದನ್ನು ವಿಭಜಿಸಿ ಬಿಜೆಪಿ ಜತೆ ಸರ್ಕಾರ ರಚಿಸುವುದೇ ‘ನಾಥ್‌ ಆಪರೇಶನ್‌’.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು